ಲೋಕಬಂಧು ನ್ಯೂಸ್, ಉಡುಪಿ
ಇಂದಿನ ಮಾಧ್ಯಮಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸುದ್ದಿಗಳಿಗಿಂತ ‘ಸ್ಟೇಟ್‌ಮೆಂಟ್ ಓರಿಯೆಂಟೆಡ್’ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಕಂಡುಬರುತ್ತಿದೆ. ಪತ್ರಕರ್ತರು ಜನಪರ ಸುದ್ದಿಗಳತ್ತ ಗಮನ ಹರಿಸಬೇಕು. ಸಮಾಜದಲ್ಲಿನ ಸಮಸ್ಯೆಗಳು, ಅಗತ್ಯತೆಗಳು ಇತ್ಯಾದಿಗಳಿಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಿವಿಮಾತು ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಬ್ರಹ್ಮಗಿರಿ ಐಎಂಎ ಭವನದಲ್ಲಿ ಶನಿವಾರ ನಡೆದ ಉಡುಪಿ ಪತ್ರಿಕಾ ಭವನ ಸಮಿತಿ ಹಾಗೂ ಕಾರ್ಕಳ, ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕು ಘಟಕಗಳ 2025– 28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಕಳಕಳಿ ಅಗತ್ಯ
ಪತ್ರಕರ್ತನಿಗೆ ಸಾಮಾಜಿಕ ಕಳಕಳಿ ಅಗತ್ಯ. ಆತ ಮಾಡುವ ಸುದ್ದಿಯಿಂದ ಸಮಾಜಕ್ಕೆ ಪ್ರಯೋಜನವಾದರೆ ಮಾತ್ರ ಆ ವೃತ್ತಿ ಸಾರ್ಥಕ ಎನಿಸುತ್ತದೆ. ಪತ್ರಕರ್ತರನ್ನು ಸಮಾಜ ಗೌರವಯುತವಾಗಿ ಕಾಣುತ್ತಿದೆ. ಪತ್ರಕರ್ತರನ್ನು ಜವಾಬ್ದಾರಿಯುತ ಸ್ಥಾನದಲ್ಲಿಟ್ಟಿದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಎಚ್ಚರಿಕೆ ಮತ್ತು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕು.
ಪತ್ರಕರ್ತನ ಬರವಣಿಗೆ ಮಾತ್ರವಲ್ಲ, ಆತನ ನಡೆ-ನುಡಿಗಳೂ ಮುಖ್ಯ. ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಸ್ವೀಕರಿಸಿದ ನಂತರ ಅದಕ್ಕೆ ನ್ಯಾಯ ಒದಗಿಸುವಂತೆ ನಡೆದುಕೊಂಡು ವೃತ್ತಿ ಧರ್ಮ ಉಳಿಸಿಕೊಳ್ಳುವುದು ಅಗತ್ಯ ಎಂದು ತಗಡೂರು ಹೇಳಿದರು.
ಪತ್ರಕರ್ತರ ಸಂಘದಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ನಕಲಿ ಪತ್ರಕರ್ತರ ಬಗ್ಗೆ ಎಚ್ಚರಿಕೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ಪತ್ರಕರ್ತ ಎಂಬ ಲೇಬಲ್ ಇಟ್ಟುಕೊಂಡು ಕೆಲವರು ಬ್ಲಾಕ್‌ಮೇಲ್ ದಂಧೆ ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಕಾರ್ಯವನ್ನು ಮಾಡಬೇಕು. ಇಲ್ಲದಿದ್ದರೆ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ಸಿಗಲು ಸಾಧ್ಯವಿಲ್ಲ ಎಂದರು.
ಸಂಘದ ನೂತನ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಕುರ್ಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಂಘದ ಉಸ್ತುವಾರಿ ಹಾಗೂ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮತ್ತು ವಾರ್ತಾಧಿಕಾರಿ ಮಂಜುನಾಥ್ ಅಭ್ಯಾಗತರಾಗಿದ್ದರು.ಈ ಸಂದರ್ಭದಲ್ಲಿ ಸಂಘದ ಮಾಸಪತ್ರಿಕೆ 'ಸನ್ಮತಿ’ಯನ್ನು ಅನಾವರಣಗೊಳಿಸಲಾಯಿತು.
ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶೀರೂರು, ಸಂಘದ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು ಹಾಗೂ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಯಶೋದಾ ಕೇಶವ್ ಅವರನ್ನು ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಆರಾಡಿ ವಾಚಿಸಿದರು. ರಾಮಾಂಜಿ ನಮ್ಮಭೂಮಿ ಆಶಯಗೀತೆ ಹಾಡಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಚೇತನ್ ಮಟಪಾಡಿ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.