ಏಕೈಕ ವಿದ್ಯಾರ್ಥಿಗೆ ಪಿಯು ಪರೀಕ್ಷೆ!

ಮುಳಬಾಗಿಲು: ಮಾ. 2ರಂದು ಸೋಮವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಳಬಾಗಿಲು ತಾಲೂಕಿನ ತಾಯಲೂರು ಗ್ರಾಮದ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ ಕೇವಲ ಓರ್ವ ವಿದ್ಯಾರ್ಥಿ ಹಾಜರಾಗಿದ್ದು ಪರೀಕ್ಷೆ ಸುಸೂತ್ರವಾಗಿ ನಡೆಯಿತು!ಈ ವರ್ಷ ತಾಯಲೂರು ಸೇರಿದಂತೆ ಗುಟ್ಚಹಳ್ಳಿ (ಬಂಗಾರುತಿರುಪತಿ), ಎನ್.ಜಿ.ಹುಲ್ಕೂರು ಹಾಗೂ ಸುಂದರಪಾಳ್ಯದ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ತಾಯಲೂರು ಕಾಲೇಜು ಪರೀಕ್ಷಾ ಕೇಂದ್ರವಾಗಿ ನಿಗದಿಯಾಗಿತ್ತು. 
ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗಿತ್ತು.
ವಸಂತ ಕುಮಾರ್ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಏಕೈಕ ಪರೀಕ್ಷಾರ್ಥಿಯಾಗಿದ್ದು, ಮೊದಲ ಪಿಯುಸಿ ಮಧ್ಯದಲ್ಲಿ ನಿಲ್ಲಿಸಿದ ಕಾರಣದಿಂದ ಕೆ.ಜಿ.ಎಫ್‌. ಬಾಲಕರ ಪಿಯು ಕಾಲೇಜಿನ ಮುಕ್ತ ವಿಭಾಗದ ಮೂಲಕ ಪರೀಕ್ಷೆಗೆ ಹಾಜರಾಗಿದ್ದಾನೆ.
ವಾಣಿಜ್ಯ ವಿಭಾಗದ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಬರೆದಿದ್ದಾನೆ.


ಓರ್ವ ಪರೀಕ್ಷಾರ್ಥಿಗೆ ಆರು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು!