ಲೋಕಬಂಧು ನ್ಯೂಸ್ | ಉಡುಪಿ, ಮಾ.14
ಯುದ್ಧ ಸನ್ನಿವೇಶದಲ್ಲಿ ಅನಿಲ ಕೊರತೆ ಉಂಟಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕಿಂಗ್ ಮಾಡುತ್ತಿದ್ದು, ಅದರಿಂದ ಬುಕಿಂಗ್ ಕ್ರ್ಯಾಷ್ ಆಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹಬಳಕೆ, ಅತ್ಯಾವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು ಸೇರಿದಂತೆ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆಯ ಮೇಲೆ ಅನಿಲ ಪೂರೈಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಮಸ್ಯೆ ಬಗ್ಗೆ ಗ್ಯಾಸ್ ಏಜೆನ್ಸಿಯವರೊಂದಿಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾ.12ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮದಿಂದ ದೇಶದಲ್ಲಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಂದತಿಗಳಿಗೆ ಸಾರ್ವಜನಿಕರು ಕಿವಿಗೊಡದಂತೆ ಅವರಿಗೆ ಪ್ರಸ್ತುತ ಸನ್ನಿವೇಶವನ್ನು ವಿವರಿಸಿ, ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂಬುದನ್ನುಮನದಟ್ಟು ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚು ಗೃಹ ಬಳಕೆದಾರರು ಎರಡು ಅನಿಲ ಸಂಪರ್ಕ ಹೊಂದಿದ್ದು, ಏಕ ಸಿಲಿಂಡರ್ ಹೊಂದಿದ್ದವರಿಗೆ ಅನಿಲ ಪೂರೈಕೆಗೆ ಆದ್ಯತೆ ನೀಡಬೇಕು. ಅನಿಲದ ಮಿತ ಬಳಕೆ ಬಗ್ಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತಿತರರಿಗೆ ಜಾಗೃತಿ ಮೂಡಿಸಬೇಕು. ಆರೋಗ್ಯ, ವಾಣಿಜ್ಯ, ಕೈಗಾರಿಕೆ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿಗೆ ಅಗತ್ಯವಿರುವ ಅನಿಲ ಸಿಲಿಂಡರ್‌ಗಳ ಬೇಡಿಕೆಯ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು.
ಬೇಡಿಕೆ ಪ್ರಮಾಣ ನಿರ್ವಹಿಸಲು ಪ್ರತೀ ಗ್ರಾಹಕರಿಗೆ ಕೊನೆಯ ಮರುಪೂರಣದ ದಿನಾಂಕದಿಂದ 25 ದಿನಗಳ ವರೆಗೆ ಇಂಟರ್-ಬುಕಿಂಗ್ ಅವಧಿ ನಿಗದಿಪಡಿಸಲಾಗಿದೆ. ಆ ಬಗ್ಗೆ ಸಾರ್ವಜನಿಕರಿಗೆ ಆಹಾರ ಇಲಾಖೆ ಮಾಹಿತಿ ಪ್ರಚುರಪಡಿಸಬೇಕು. ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅನಿಲ ಪೂರೈಕೆ ಕುರಿತು ಸಾರ್ವಜನಿಕ ಮಾಧ್ಯಮಗಳ ಮೂಲಕ ತಪ್ಪು ಸಂದೇಶ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ತಮ್ಮ ತೊಂದರೆ ನಿವಾರಿಸಲು ಸಹಾಯವಾಣಿ ಸಂಖ್ಯೆ 112ನ್ನು ಪ್ರಚುರಪಡಿಸುವುದರೊಂದಿಗೆ ಸ್ವೀಕರಿಸಿದ ದೂರುಗಳನ್ನು ತಕ್ಷಣ ಪರಿಹರಿಸುವಂತೆ ತಿಳಿಸಿದರು.
ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ಮಾರಾಟ, ಸಂಗ್ರಹಣೆ, ಶೇಖರಣೆ ಹಾಗೂ ಸಾಗಾಟ ಕಂಡುಬಂದಲ್ಲಿ ಜಿಲ್ಲಾಡಳಿತ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ಯಾಸ್ ಸಿಲಿಂಡರ್‌ಗಳ ಅನಧಿಕೃತ ದಾಸ್ತಾನು, ಸಾಗಾಟ ಹಾಗೂ ರಿಫಿಲ್ಲಿಂಗ್ ಕಂಡುಬಂದಲ್ಲಿ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಜನರು ಗೃಹ ಬಳಕೆಯ ಅನಿಲವನ್ನು ಆಟೋಮೊಬೈಲ್'ಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಕಾಳಸಂತೆಯಲ್ಲಿ ಅನಿಲ ಮಾರಾಟ ಆಗದಂತೆ ನೋಡಿಕೊಳ್ಳಲು ಗ್ಯಾಸ್ ಏಜೆನ್ಸಿಯ ಸಪ್ಲೆಯರ್, ಡೀಲರ್ಸ್ ಹಾಗೂ ಕಂಪನಿಗಳ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ಗ್ಯಾಸ್ ಏಜೆನ್ಸಿ ಮಾಲೀಕರು, ಸರಬರಾಜುದಾರರು ಮೊದಲಾದವರಿದ್ದರು.