ಉಡುಪಿ ನಗರಸಭೆ ರಶೀದಿ ಅವ್ಯವಹಾರ ತನಿಖೆ ನಡೆಸಿ

ಉಡುಪಿ: ಸ್ಥಳೀಯ ನಗರಸಭೆಯ ತೆರಿಗೆ ಪಾವತಿ ರಶೀದಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ಉಡುಪಿ ನಗರ ವತಿಯಿಂದ ನಗರಾಧ್ಯಕ್ಷ ದಿನೇಶ್ ಅಮೀನ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಉಡುಪಿ ನಗರಸಭೆಯಲ್ಲಿ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಆ ಬಗ್ಗೆ ನಗರಸಭೆ ಪೌರಾಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೇಲ್ನೋಟಕ್ಕೆ ಆರೋಪಿಗಳೆಂದು ಕಂಡುಬಂದಿರುವ ಮೂವರನ್ನು ಬಂಧಿಸಲಾಗಿದೆ.


ತೆರಿಗೆ ಪಾವತಿ ಚಲನ್'ಗಳಿಗೆ ನಕಲಿ ಬ್ಯಾಂಕ್ ಸೀಲ್ ಬಳಸಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸಾರ್ವಜನಿಕರಲ್ಲಿ ಗೊಂದಲ ಹಾಗೂ ಸಂಶಯ ಮೂಡಿಸಿದೆ. ದಿನಂಪ್ರತಿ ಇಂಥ ನಕಲಿ ರಶೀದಿ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.


ಉಡುಪಿ ನಗರಸಭೆ ತನ್ನದೇ ಆದ ಘನತೆ, ಗೌರವ ಹಾಗೂ ಹಿರಿಮೆ ಹೊಂದಿದ್ದು ಇಂಥ ಪ್ರಕರಣಗಳಿಂದ ತೆರಿಗೆದಾರರು ಆತಂಕಕ್ಕೆ ಒಳಗಾಗಿರುವುದಲ್ಲದೆ ನಾಗರಿಕರು ತಲೆ ತಗ್ಗಿಸುವಂತಾಗಿದೆ.


ಉಡುಪಿ ನಗರಸಭೆಯಲ್ಲಿ ಇತ್ತೀಚೆಗೆ ಸಾರ್ವಜನಿಕರ ಹಣ ದುರುಪಯೋಗದ ಬಹಳಷ್ಟು ಸುದ್ದಿಗಳು ಕೇಳಿಬರುತ್ತಿದ್ದು, ಈ ಪ್ರಕರಣ ಗಂಭೀರ ಸ್ವರೂಪ ಹೊಂದಿರುವ ಸಾಧ್ಯತೆ ಇರುವುದರಿಂದ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಬ್ಯಾಂಕು ಹಾಗೂ ನಗರಸಭೆಯ ನೌಕರರು ಮತ್ತು ಅಧಿಕಾರಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಾನೂನಾತ್ಮಕ ಪ್ರಕರಣ ದಾಖಲಿಸಿ, ಸಮಗ್ರ ಇಲಾಖಾ ತನಿಖೆಗೆ ಒಳಪಡಿಸುವ ಜೊತೆಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಲ್ಲಾ ಆರೋಪಿಗಳನ್ನು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯರು ಇದ್ದರು.