ಮತದಾರರಿಗೆ ಎಸ್ಐಆರ್ ಮಾಹಿತಿ ಅಗತ್ಯ

ಲೋಕಬಂಧು ನ್ಯೂಸ್ ಉಡುಪಿ, ಮಾ.20
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಶೀಘ್ರ ಬರುವುದರಿಂದ ಕೇಂದ್ರ ಸರಕಾರ ತಂದ ಎಸ್ಐಟಿ ಕಾಯ್ದೆ ಬಗ್ಗೆ ಜಾಗೃತರಾಗಿರಬೇಕು. ಪಕ್ಷದಿಂದ ನೋಂದಾಯಿತರಾದ ಬಿಎಲ್ಎ2ಗಳು ಕಾಯ್ದೆ ಬಗ್ಗೆ ತಿಳಿದುಕೊಂಡು ಮತದಾರರಿಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.


ಪ್ರತಿಯೊಬ್ಬ ನಾಗರಿಕನೂ ತನ್ನ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳುವ ಕಾಲ ಬಂದಿದೆ. ಪ್ರಸ್ತುತ ದಾಖಲೆ ಪರಿಶೀಲನೆ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವ ಕೆಲಸ ನಡೆಯುತ್ತಿದೆ. ಸರಕಾರದ ಅನುದಾನದಿಂದ ನಡೆಯುವ ಯೋಜನೆಗಳನ್ನು ಬಿಜೆಪಿ ಮುಖಂಡರು ತಮ್ಮದೇ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಜನತೆ ಎಚ್ಚರವಾಗಿರಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಎಸ್ಐಟಿ ಬಗ್ಗೆ ತಿಳುವಳಿಕೆ  ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.


ಮುಖಂಡರಾದ ಪ್ರಸಾದರಾಜ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗಡೆ ಕೊಳ್ಕೆಬೈಲ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮೊದಲಾದವರಿದ್ದರು.


ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ ಸ್ವಾಗತಿಸಿ, ಸಹಕಾರಿ ಕಾಂಗ್ರೆಸ್  ಅಧ್ಯಕ್ಷ  ಅಣ್ಣಯ್ಯ ಸೇರಿಗಾರ್ ನಿರ್ವಹಿಸಿದರು. ಜಿಲ್ಲಾ ವಕ್ತಾರ  ಭಾಸ್ಕರ ರಾವ್  ಕಿದಿಯೂರು ವಂದಿಸಿದರು.