ಲೋಕಬಂಧು ನ್ಯೂಸ್ ಮಂಗಳೂರು, ಮಾ.21
ತೆಂಕುತಿಟ್ಟು ಯಕ್ಷಗಾನದ ಮೇರು ಪ್ರತಿಭೆ, ಸವ್ಯಸಾಚಿ, ದಶಾವತಾರಿ ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಗೋವಿಂದ ಭಟ್ (88) ಇನ್ನು ನೆನಪು ಮಾತ್ರ. ವೀರ ರಸದ ವೇಷಗಳಿಗೆ ಹೊಸ ಕಳೆಯನ್ನು ಮೂಡಿಸಿದ್ದ ಅಭಿನಯ ಚತುರ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋವಿಂದ ಭಟ್ಟ ಅವರು ತೀರ್ಥಹಳ್ಳಿಯ ತಮ್ಮ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದರು.ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರಿಕುಮೇರು ಎಂಬ ಸಣ್ಣ ಗ್ರಾಮದಲ್ಲಿ 1938ರ ಮಾರ್ಚ್ 22ರಂದು ಜನಿಸಿದ್ದ ಗೋವಿಂದ ಭಟ್, ಯಕ್ಷಗಾನದಲ್ಲಿ ಏರಿದ ಎತ್ತರ ಅದ್ವಿತೀಯ. ತಂದೆ ಶಿವರಾಮ ಭಟ್ಟ ಮತ್ತು ತಾಯಿ ಪಾರ್ವತಿಅಮ್ಮನ ಕಡು ಬಡತನದ ನಡುವೆಯೂ ಏಳನೇ ತರಗತಿಯ ವರೆಗೆ ವಿದ್ಯಾಭ್ಯಾಸ. ಓರಗೆಯವರ ಸಂಪರ್ಕ, ಯಕ್ಷಗಾನದ ಮೇಲಿನ ಅಪಾರ ಪ್ರೀತಿಯಿಂದಾಗಿ 13ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ರಂಗಪ್ರವೇಶ ಮಾಡಿದ್ದರು.
ಧರ್ಮಸ್ಥಳ ಮೇಳದಲ್ಲಿ 50 ವರ್ಷಗಳಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸಿದ ಗೋವಿಂದ ಭಟ್ಟರು ಅಪಾರ ಖ್ಯಾತಿ ಗಳಿಸಿದ್ದರು. ಅತಿಥಿ ಕಲಾವಿದರ ಕೂಡುವಿಕೆಯ ಆಟದಲ್ಲಿ ಗೋವಿಂದ ಭಟ್ಟರು ಇದ್ದಾರೆ ಎಂದರೆ ಅಲ್ಲೊಂದು ಹೆಚ್ಚುಗಾರಿಕೆ ಇತ್ತು. ಮೇಳದ ಶಿಸ್ತು ಮತ್ತು ಸಂಪ್ರದಾಯದ ಕಾವಲುಗಾರನಂತೆ ಪಾತ್ರಕ್ಕೆ ಅಪಚಾರವಾಗದಂತೆ ಕಂಚಿನ ಕಂಠದ ಮಾತುಗಾರಿಕೆ, ಲಯಬದ್ಧ ನಾಟ್ಯ ತಾಳಮದ್ದಲೆಗಳ ಓಘ ಅವರನ್ನು ಜನಪ್ರಿಯರನ್ನಾಗಿಸಿತ್ತು.
ಓರಗೆಯ ಕಲಾವಿದರ ನಡುವೆ 'ದಶಾವತಾರಿ' ಎಂದೇ ಕರೆಯಲ್ಪಡುತ್ತಿದ್ದ ಅವರು ಯಾವುದೇ ವೇಷಕ್ಕಾದರೂ ಸೈ ಎನಿಸಿದ್ದರು. ವೀರ, ರೌದ್ರ ರಸದ ವೇಷಗಳಿಗೆ ಅವರ ಹಾವಭಾವ ಹೇಳಿ ಮಾಡಿಸಿದಂತಿತ್ತು. ಭೀಮ, ಅರ್ಜುನ, ಭೀಷ್ಮ, ಕರ್ಣ, ಕೌರವ, ದಶರಥ, ವಾಲಿಯಂಥ ಪ್ರಬುದ್ಧ ಪೌರಾಣಿಕ ಪಾತ್ರಗಳಿಗೆ ಹೊಸ ಆಯಾಮ ನೀಡಿದವರು ಗೋವಿಂದ ಭಟ್ಟರು. ಕುಂಬ್ಳೆ ಸುಂದರ ರಾವ್ ಜೊತೆಗಿನ ಅವರ ಪ್ರತಿಗಾಮಿ ಮಾತುಗಾರಿಕೆ ನೋಡುಗರು, ಕೇಳುಗರಲ್ಲಿ ಅಮೋಘ ಎನಿಸುವಂತಿತ್ತು. ವೀರ ಮತ್ತು ಕರುಣ ರಸದ ಪಾತ್ರಗಳಲ್ಲಿ ಅವರನ್ನು ಮೀರಿಸುವ ಮತ್ತೊಬ್ಬರಿಲ್ಲ ಎಂಬ ಮಾತು ಜನಜನಿತವಾಗಿತ್ತು.
ಅವರು ಪತ್ನಿ, ಮೂವರು ಪುತ್ರರ ಸಹಿತ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ.