ಏ.4: ಕಟಪಾಡಿಯಲ್ಲಿ ಲೊಂಬಾರ್ಡ್ ಮಿಷನ್ ಆಸ್ಪತ್ರೆಯ ನೂತನ ಆರೋಗ್ಯ ಕೇಂದ್ರ ಉದ್ಘಾಟನೆ

ಲೋಕಬಂಧು ನ್ಯೂಸ್ | ಉಡುಪಿ, ಏ.2
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಮತ್ತು ಕೈಗೆಟಕುವ ದರದ ವೈದ್ಯಕೀಯ ಸೇವೆ ಒದಗಿಸುವ ಆಶಯದೊಂದಿಗೆ ಉಡುಪಿಯ ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಕಟಪಾಡಿಯಲ್ಲಿ ತನ್ನ ನೂತನ ಲೊಂಬಾರ್ಡ್ ಮಿಷನ್ ಆಸ್ಪತ್ರೆ ಹೆಲ್ತ್ ಸೆಂಟರ್‌ನ್ನು ಆರಂಭಿಸುತ್ತಿದ್ದು, ಹೊಸ ಆರೋಗ್ಯ ಕೇಂದ್ರದ ಉದ್ಘಾಟನೆ ಏ. 4ರಂದು ಬೆಳಿಗ್ಗೆ 10:30ಕ್ಕೆ ಕಟಪಾಡಿ ಬಸ್ ನಿಲ್ದಾಣದ ಬಳಿ ನಡೆಯಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸುಶಿಲ್ ಜತನ್ನ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೆ.ಹೇಮಚಂದ್ರ ಕುಮಾರ್ ನೂತನ ಆರೋಗ್ಯ ಕೇಂದ್ರವನ್ನು ಆಶೀರ್ವದಿಸಿ ಲೋಕಾರ್ಪಣೆ ಮಾಡಲಿದ್ದಾರೆ. ಆಸ್ಪತ್ರೆ ನಿರ್ದೇಶಕ ಡಾ.ಸುಶಿಲ್ ಜತನ್ನ ಅಧ್ಯಕ್ಷತೆ ವಹಿಸುವರು.


ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ಫಾ.ಫೌಸ್ಟಿನ್ ಲೂಕಸ್ ಲೋಬೋ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸರಸ್ವತಿ ಕ್ಲಿನಿಕ್'ನ ಡಾ. ಎ.ರವೀಂದ್ರನಾಥ ಶೆಟ್ಟಿ, ಕಟಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಉದ್ಯಮಿ ಇಕ್ಬಾಲ್ ಸಂಶುದ್ದೀನ್, ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮ ನಿರ್ದೇಶಕ ಪ್ರಶಾಂತ್ ಜತನ್ನ ಉಪಸ್ಥಿತರಿರುವರು.


ಸಿ.ಎಸ್.ಐ-ಕೆಎಸ್.ಡಿ. ಖಜಾಂಚಿ ರೆ.ಐವಾನ್ ಡಿ' ಸೋನ್ಸ್, ಉಡುಪಿ ಏರಿಯಾ ಚೇರ್ಮನ್ ರೆ.ಕಿಶೋರ್ ಕುಮಾರ್, ಅಂಬಾಡಿ ಸಿ.ಎಸ್.ಐ ಚರ್ಚಿನ ರೆ. ಅಕ್ಷಯ್ ಅಮ್ಮಣ್ಣ ಹಾಗೂ ಸಿ.ಎಸ್.ಐ-ಕೆಎಸ್.ಡಿ ಸಹ ಕಾರ್ಯದರ್ಶಿ ಸ್ಟೀಫನ್ ಕರ್ಕಡ ಭಾಗವಹಿಸಲಿದ್ದಾರೆ ಎಂದು ಡಾ. ಜತ್ತನ್ನ ತಿಳಿಸಿದರು.


ಆರೋಗ್ಯ ಸೇವೆ ಸೀಮಿತವಾಗಿರುವ ಸಮುದಾಯಗಳಿಗೆ ತಲುಪುವುದು ನಮ್ಮ ಬದ್ಧತೆಯಾಗಿದೆ. ಯಾರೂ ವೈದ್ಯಕೀಯ ಸೇವೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಗ್ರಾಮೀಣ ಸಮುದಾಯಗಳನ್ನು ವಿಶೇಷ ವೈದ್ಯಕೀಯ ಸೇವೆಗಳೊಂದಿಗೆ ಸಂಪರ್ಕಿಸುವ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು.


ಸುದ್ದಿಗೋಷ್ಟಿಯಲ್ಲಿ ಲೊಂಬಾರ್ಡ್ ಆಸ್ಪತ್ರೆಯ ಆಡಳಿತಾಧಿಕಾರಿ ಡೀನಾ ಪ್ರಭಾವತಿ, ಪಿಆರ್.ಓ. ರೋಹಿ ರತ್ನಾಕರ್, ಆಪರೇಶನ್ಸ್ ಅಧಿಕಾರಿ ಕಾವ್ಯಶ್ರೀ ಶೆಟ್ಟಿ ಇದ್ದರು.