ಲೋಕಬಂಧು ನ್ಯೂಸ್ | ಉಡುಪಿ, ಏ.3
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕುಂಭಾಭಿಷೇಕ ಹಿನ್ನೆಲೆಯಲ್ಲಿ 'ಬನ್ನಂಜೆ ಶ್ರೀ ಮಹಾಲಿಂಗೇಶ್ವರ ವೈಭವ' ಪ್ರಯುಕ್ತ ಬ್ರಹ್ಮಕಲಶೋತ್ಸವ ಸಮಿತಿ ಸಿದ್ಧಪಡಿಸಿರುವ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. ಅವರ ಮಧುರ ಕಂಠದಿಂದ ಮೂಡಿಬಂದ 'ಬನ್ನಂಜೆ ಒಡೆಯ ಮಹಾಲಿಂಗೇಶ್ವರ' ಧ್ವನಿಸುರುಳಿಯನ್ನು ಶುಕ್ರವಾರ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬಿಡುಗಡೆಗೊಳಿಸಿದರು.ದೇವಾಲಯಗಳು ಭಕ್ತಿಯ ತಾಣ. ಭಗವಂತನ ಅನುಗ್ರಹ ಪ್ರಾಪ್ತಿಯಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ ಎಂದರು.
ಬ್ರಹ್ಮಕಲಶ ಮಹೋತ್ಸವದ ಯಶಸ್ಸಿಗೆ ಪೊಲೀಸ್ ಇಲಾಖೆ ಸಹಕಾರ ನೀಡಲಿದ್ದು, ಅಗತ್ಯ ಬಂದೋಬಸ್ತ್ ಕಾರ್ಯದಲ್ಲಿ ನೆರವಾಗಲಿದೆ ಎಂದರು.
ಧ್ವನಿಸುರುಳಿಗೆ ಧ್ವನಿ ನೀಡಿದ ಯಶವಂತ ಎಂ.ಜಿ. ಅವರು ಕ್ಷೇತ್ರದ ಸ್ಥಳಪುರಾಣ ಆಧರಿಸಿ ಕವನ ರಚಿಸಿ ಸಂಯೋಜಿಸಲಾಗಿದೆ ಎಂದರು.
ಅಭ್ಯಾಗತರಾಗಿದ್ದ ನಿಡಂಬೂರು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ ರಾವ್, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಶುಭ ಹಾರೈಸಿದರು.
ಬನ್ನಂಜೆ ದೇವಳದ ಆಡಳಿತ ಮೊಕ್ತೇಸರ ಮಾಧವ ಪೂಜಾರಿ ಬನ್ನಂಜೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ ಕಾಂಚನ್ ಕಾರ್ಯಕ್ರಮ ಸಂಘಟಿಸಿದ್ದರು. ದೇವಳದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ ಪ್ರಾರ್ಥಿಸಿದರು. ಆಡಳಿತ ಸಮಿತಿ ಸದಸ್ಯ ದಿನೇಶ ಪುತ್ರನ್ ಇದ್ದರು. ಕೃತಿ ಮೂಡಬೆಟ್ಟು ನಿರೂಪಿಸಿದರು.