ಬ್ಲ್ಯಾಕ್‌ಮೇಲ್ ಆರೋಪಿ ಝೀನತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಲೋಕಬಂಧು ನ್ಯೂಸ್ | ಉಡುಪಿ, ಜು.9
ರಿಯಲ್ ಎಸ್ಟೇಟ್ ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ವಂಚಿಸಿದ ಝೀನತ್ ವಿರುದ್ಧ ಮತ್ತೊಂದು ಬ್ಲ್ಯಾಕ್‌ಮೇಲ್ ಪ್ರಕರಣ ಇಲ್ಲಿನ ನಗರ ಠಾಣೆಯಲ್ಲಿ ದಾಖಲಾಗಿದೆ‌.
ಝೀನತ್ ಜೊತೆ ಮತ್ತೊಬ್ಬಾಕೆಯ ವಿರುದ್ಧವೂ ಕೇಸು ದಾಖಲಾಗಿದ್ದು 51.84 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣದಲ್ಲಿ ಆರೋಪಿತರಾದ ಝೀನತ್ ಹಾಗೂ ಗೀತಾ ರಾವ್ ವಿರುದ್ಧ ದೂರು ದಾಖಲಾಗಿದೆ.


ಆರೋಪಿಗಳ ಪೈಕಿ ಝೀನತ್ ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಈಗಾಗಲೇ ಬಂಧಿತಳಾಗಿದ್ದಾಳೆ.


ಬನ್ನಂಜೆಯ ತೇಜೇಶ್ವರ್ ರಾವ್ 2018ರಿಂದ 2022ರ ವರೆಗೆ ಉಡುಪಿಯ ಮಹಾಮಾಯಾ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿ ನಡೆಸುತ್ತಿದ್ದರು. ಅದೇ ಅವಧಿಯಲ್ಲಿ ಆರೋಪಿಗಳಾದ ಝೀನತ್ ಹಾಗೂ ಗೀತಾ ರಾವ್ ಪರಿಚಯವಾಗಿತ್ತು.


ಮೋದಿಕೇ‌ರ್ ಕಚೇರಿಯಲ್ಲಿ ಝೀನತ್ ಸೆಲ್ಸಿ ತೆಗೆದುಕೊಳ್ಳುವ ನೆಪದಲ್ಲಿ ವೀಡಿಯೊ ಮಾಡಿಕೊಂಡು, ಅದನ್ನು ದುರುಪಯೋಗಪಡಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ತೇಜೇಶ್ವ‌ರ್ ರಾವ್ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ, ಹಂತ ಹಂತವಾಗಿ 36 ಲಕ್ಷದ 84 ಸಾವಿರ ರೂ. ಹಣ ಪಡೆದಿರುವ ಆರೋಪ ಕೇಳಿಬಂದಿದೆ.


ಇನ್ನೋರ್ವ ಆರೋಪಿ ಗೀತಾ ರಾವ್ ಕೂಡಾ ತೇಜೇಶ್ವ‌ರ್ ರಾವ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಹಂತ ಹಂತವಾಗಿ 15 ಲಕ್ಷ ರೂ. ಹಣ ಪಡೆದುಕೊಂಡಿರುವ ಜೊತೆಗೆ ಚಿನ್ನಾಭರಣ ಹಾಗೂ ಕೆಲವು ಖಾಲಿ ಚೆಕ್‌ಗಳನ್ನು ಪಡೆದು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.


ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.