ಲೋಕಬಂಧು ನ್ಯೂಸ್ | ಉಡುಪಿ, ಜು.6
ಪೇಜಾವರ ಶ್ರೀಗಳ ಗಮನಕ್ಕೆ ತಾರದೇ ಅನಧಿಕೃತವಾಗಿ ಶ್ರೀಗಳ ಫೋಟೊ ಮತ್ತು ಶ್ರೀಮಠದ ಹೆಸರು ಬಳಸಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದ ಶಶಿಧರ ಭಟ್ ಅವರನ್ನು ಪೇಜಾವರ ಮಠದ ನೀಲಾವರ ಮತ್ತು ಕೊಡವೂರು ಗೋಶಾಲೆಯ ಗೋವರ್ಧನಗಿರಿ ಟ್ರಸ್ಟ್‌ನಿಂದ ವಜಾ ಮಾಡಲಾಗಿದೆ ಎಂದು ಗೋವರ್ಧನ ಗಿರಿ ಟ್ರಸ್ಟ್‌ನ ವಿಶ್ವಸ್ಥ ಲಕ್ಷ್ಮೀನಾರಾಯಣ ರಾವ್ ಮಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೇಜಾವರ ಶ್ರೀಗಳು ಹಾಗೂ ಟ್ರಸ್ಟ್‌ನ ಗಮನಕ್ಕೆ ತಾರದೇ ಅನಧಿಕೃತವಾಗಿ ಶ್ರೀಪಾದರ ಫೊಟೋ ಹಾಗೂ ಶ್ರೀಮಠದ ಹೆಸರನ್ನು ಮನವಿಗಳಲ್ಲಿ ಬಳಸಿ ದೇಣಿಗೆ ಸಂಗ್ರಹಿಸಿರುವ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ನೀಲಾವರ ಗೋಶಾಲೆಯ ಟ್ರಸ್ಟ್‌ನಿಂದ ಅವರನ್ನು ವಜಾ ಮಾಡಲಾಗಿದೆ.
ಗೋಶಾಲೆಗೂ, ಅವರ ತಂಡಕ್ಕೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕರು ಮೋಸ ಹೋಗಬಾರದು ಎಂದು ಗೋವರ್ಧನ ಟ್ರಸ್ಟ್ ಹಾಗೂ ಪೇಜಾವರ ಅಧೋಕ್ಷಜ ಮಠ ಉಡುಪಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಗೋಶಾಲೆಗೆ ದೇಣಿಗೆ ನೀಡುವವರು ಟ್ರಸ್ಟ್‌ನ ಅಧಿಕೃತ ರಶೀದಿಯನ್ನು ಕಡ್ಡಾಯವಾಗಿ ಪಡೆಯುವಂತೆ ತಿಳಿಸಲಾಗಿದೆ.