ಲೋಕಬಂಧು ನ್ಯೂಸ್ | ಉಡುಪಿ, ಏ.1
ಜಿಲ್ಲೆಯ ಗೃಹ ಬಳಕೆ ಅನಿಲ ಗ್ರಾಹಕರಿಗೆ ಎಲ್.ಪಿ.ಜಿ. ಸಿಲಿಂಡರ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳು ಹಾಗೂ ಸಿಲಿಂಡರ್ ವಿತರಕ
ಸಂಸ್ಥೆಯವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗೃಹ ಬಳಕೆ ಸೇರಿದಂತೆ ಇತರ ಅನಿಲ ವಿತರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ವಿತರಣೆ ಅದರಲ್ಲಿಯೂ ಏಕ ಸಿಲಿಂಡರ್ ಹೊಂದಿರುವವರಿಗೆ ವಿತರಣೆಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರು ಕೇಳಿಬರುತ್ತಿವೆ. ಗೃಹ ಬಳಕೆ ಅನಿಲ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿತರಿಸಲು ಸರಕಾರ ಬದ್ಧವಿದೆ. ಗೃಹ ಬಳಕೆಯ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ವಾಣಿಜ್ಯ ಬಳಕೆಯ ಗ್ರಾಹಕರಿಗೆ ಶೇ.20ರಷ್ಟು ಪ್ರಮಾಣದಲ್ಲಿ ಅನಿಲ ನೀಡುವುದಾಗಿ ಸರಕಾರ ಹೇಳಿದೆ. ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆ, ಶಾಲೆ ಸೇರಿದಂತೆ ಅತೀ ಅಗತ್ಯವಿರುವ ಸಂಸ್ಥೆಗಳಿಗೆ ಆದ್ಯತೆ ಮೇಲೆ ವಾಣಿಜ್ಯ ಸಿಲಿಂಡರ್ ವಿತರಿಸಬೇಕು. ಮಣಿಪಾಲ ವ್ಯಾಪ್ತಿಯಲ್ಲಿ ನೋಂದಾಯಿತ ಗ್ರಾಹಕರಿಗೆ ನೋಂದಣಿ ಮಾಡಿಕೊಂಡ ಸಂಸ್ಥೆಗಳಿಂದ ಅನಿಲ ವಿತರಣೆ ಆಗುತ್ತಿಲ್ಲ. ಇತರ ಸಂಸ್ಥೆಗಳಿಗೆ ನೋಂದಣಿ ವರ್ಗಾಯಿಸುವುದು ಅನಿವಾರ್ಯ ಎಂಬ ದೂರಿನ ಬಗ್ಗೆ ಅನಿಲ ಕಂಪನಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅನಧಿಕೃತ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಜನರೇಟರ್ ಹಾಗೂ ಮೀನುಗಾರಿಕೆ ಬೋಟ್'ಗಳಿಗೆ ನಿರಂತರವಾಗಿ ಇಂಧನ ಕೊಂಡೊಯುತ್ತಿರುವವರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ ವಾಹನ ಬಳಕೆಯ ಎಲ್.ಪಿ.ಜಿ. ಹಾಗೂ ಸಿಎನ್.ಜಿ. ಅನಿಲವನ್ನು ಆಯಿಲ್ ಕಾರ್ಪೊರೇಶನ್ ಸಂಸ್ಥೆಗಳು ನಿಗದಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿಗದಿಪಡಿಸಿರುವ ಮೊತ್ತ ಹಾಗೂ ದಾಸ್ತನನ್ನು ತಮ್ಮ ವಿತರಣಾ ಕೇಂದ್ರದಲ್ಲಿ ಜನಸಾಮಾನ್ಯರಿಗೆ ಕಾಣುವಂತೆ ಪ್ರದರ್ಶಿಸಬೇಕು. ಒಂದೊಮ್ಮೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಗೃಹ ಬಳಕೆ ಸಿಲಿಂಡರ್'ಗಳನ್ನು ಇತರ ಉದ್ದೇಶಗಳಿಗೆ ಬಳಸದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಬಳಸಿದಲ್ಲಿ ಅಂಥವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಏಕ ಸಿಲಿಂಡರ್ ಹೊಂದಿರುವ ಗ್ರಾಹಕರು ಸಿಲಿಂಡರ್ ಪಡೆದ 25 ದಿನಗಳ ನಂತರ ಹಾಗೂ ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರು ಅನಿಲ ಪೂರೈಕೆ ಮಾಡಿದ 35 ದಿನಗಳ ನಂತರ ಬುಕಿಂಗ್ ಮಾಡಲು ಅವಕಾಶವಿದೆ. ಆದಷ್ಟು ಮನೆ ಮನೆಗೆ ಗೃಹ ಬಳಕೆ ಸಿಲಿಂಡರ್ ವಿತರಣೆ ಮಾಡುವುದರೊಂದಿಗೆ ಏಜನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವಿತರಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ಗ್ಯಾಸ್ ಏಜೆನ್ಸಿ ಹಾಗೂ ಬಂಕುಗಳ ಮಾಲೀಕರು, ವಿತರಕರು ಉಪಸ್ಥಿತರಿದ್ದರು.