ಶಿಸ್ತು ಕರ್ತವ್ಯ ಪಾಲನೆ ಪೊಲೀಸ್ ಧ್ವಜದ ಸಂಕೇತ

ಲೋಕಬಂಧು ನ್ಯೂಸ್ | ಉಡುಪಿ, ಏ.2
ಧ್ವಜ ದಿನಾಚರಣೆ ಪೊಲೀಸ್ ಇಲಾಖೆಯ ಮಹತ್ವದ ದಿನವಾಗಿದೆ. ಕರ್ನಾಟಕ ಪೊಲೀಸ್ ಪಡೆ ಅಧಿಕೃತವಾಗಿ ರಚನೆಯಾದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲೆಡೆ ಆಚರಿಸಲಾಗುತ್ತಿದೆ. ಪೊಲೀಸ್ ಧ್ವಜ ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆಯ ಸಂಕೇತ ಎಂದು ನಿವೃತ್ತ ಮಹಿಳಾ ಪೊಲೀಸ್ ನಿರೀಕ್ಷಕಿ ಸುಜಾತ ವಿ. ಸಾಲಿಯಾನ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಚಂದು ಮೈದಾನದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.


ಪ್ರತೀ ವರ್ಷ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡುವುದರೊಂದಿಗೆ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದರು.


ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಕೀರ್ತಿ ಕರ್ನಾಟಕ ಪೊಲೀಸರಿಗಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿಯೂ ಉಡುಪಿ ಜಿಲ್ಲೆಯ ಪೊಲೀಸರು ಮೊದಲನೇ ಸ್ಥಾನದಲ್ಲಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.


ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಯೋಜನೆ ಪ್ರಾರಂಭಿಸಿದ್ದು, ಯೋಜನೆಯಡಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಸಂದರ್ದಲ್ಲಿ 1.5 ಲಕ್ಷ ರೂ., ತುರ್ತು ಸಂದರ್ಭದಲ್ಲಿ 3 ಲಕ್ಷ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು ಮೂರು ಮಂದಿ ನಿವೃತ್ತ ಪೊಲೀಸ್ ಸಿಬ್ಬಂದಿ ಈ ಯೋಜನೆಯ ಪ್ರಯೋಜನ ಪಡೆದಿರುವುದಾಗಿ ತಿಳಿಸಿದರು.


ಪ್ರತೀ ವರ್ಷ ಸುಮಾರು 13 ಲಕ್ಷಕ್ಕೂ ಅಧಿಕ ಮೊತ್ತ ಮಂಜೂರಾಗುತ್ತಿದ್ದು, ಇನ್ನೂ ಹೆಚ್ಚಿನ ಮೊತ್ತದ ಮಂಜೂರಾತಿಗಾಗಿ ಅನುದಾನದ ಕೊರತೆ ಇದ್ದು, ಪ್ರಧಾನ ಕಚೇರಿಗೆ 15 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.


ಪ್ರಸಕ್ತ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿವೃತ್ತ ಕಲ್ಯಾಣ ಖಾತೆಯಿಂದ 13,08,050 ರೂ. ವೈದ್ಯಕೀಯ ಧನಸಹಾಯ ನೀಡಲಾಗಿದೆ. ಯಾವುದೇ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಹವಾಲು ಸಲ್ಲಿಸುವುದಿದ್ದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.


ಈ ಸಂದರ್ಭದಲ್ಲಿ ಡಿಎಆರ್ ಆರ್.ಪಿ.ಐ. ರವಿಕುಮಾರ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೈದ್ಯಕೀಯ ಧನ ಸಹಾಯ ವಿತರಿಸಲಾಯಿತು. ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಮೊದಲಾದವರಿದ್ದರು.


ಎಎಸ್.ಪಿ ಸುಧಾಕರ ನಾಯಕ್ ವಂದಿಸಿದರು. ಡಿಇಎಆರ್ ಯೋಗೀಶ್ ನಾಯ್ಕ ನಿರೂಪಿಸಿದರು.