ಲೋಕಬಂಧು ನ್ಯೂಸ್ | ಉಡುಪಿ, ಏ.3
ಭಗವಾನ್ ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ, ಕ್ರೈಸ್ತ ಸಮುದಾಯದವರಿಗೆ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಏಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು.
ಧರ್ಮಪ್ರಾಂತದ ಪ್ರಧಾನ ಚರ್ಚ್ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್'ನಲ್ಲಿ ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ವಂ.ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿ ನೆರವೇರಿಸಿದರು.
ಈ ವೇಳೆ ಸಂದೇಶ ನೀಡಿದ ಅವರು ಈ ಲೋಕವನ್ನು ಉಳಿಸಲು ಶತ್ರುಗಳ ವಶವಾದ ಏಸುಕ್ರಿಸ್ತ ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದರು. ಈ ಲೋಕದಲ್ಲಿ ಪಾಪ ಮಾಡಿದ ಪ್ರತೀ ಮನುಷ್ಯನಿಗಾಗಿ ಅವರು ಶಿಲುಬೆಯನ್ನು ಹೊತ್ತು ಲೋಕವನ್ನು ಕಾಪಾಡಲು ತನ್ನ ಪ್ರಾಣವನ್ನೇ ಅರ್ಪಿಸಿದರು. ಏಸುಕ್ರಿಸ್ತ ತನ್ನ ಗೆಳೆಯನಿಗಾಗಿ ಪ್ರಾಣ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ ಎನ್ನುವುದನ್ನು ತನ್ನ ಕೃತಿಯ ಮೂಲಕ ತೋರಿಸಿದರು. ಕ್ರೂರ ಶಿಲುಬೆಯ ಮರಣಕ್ಕೆ ಒಳಗಾದ ಏಸುಕ್ರಿಸ್ತ ಪ್ರೀತಿ, ಕ್ಷಮೆ ಮತ್ತು ತ್ಯಾಗದ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದರು.
ಈ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೋಜ, ಸಂಪದ ಸಂಸ್ಥೆ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಪಿಲಾರ್ ಸಭೆಯ ವಂ.ವಿನ್ಸೆಂಟ್ ಮಚಾದೊ ಉಪಸ್ಥಿತರಿದ್ದರು
ಜಿಲ್ಲೆಯ ಕೆಲವು ಚರ್ಚುಗಳಲ್ಲಿ ಏಸುಕ್ರಿಸ್ತನ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತಪಡಿಸಲಾಯಿತು.
ಧರ್ಮಗುರುಗಳು ರಕ್ತವರ್ಣದ ಪೂಜಾಬಟ್ಟೆ ಧರಿಸಿ ಏಸುಕ್ರಿಸ್ತನ ಕೊನೆಯ ಗಳಿಗೆಯ ವೃತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ಮುತ್ತಿಟ್ಟು ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡಬಗ್ಗರಿಗೆ ನೀಡಿದರು.