ಲೋಕಬಂಧು ನ್ಯೂಸ್ | ಉಡುಪಿ, ಏ.5
ಇಲ್ಲಿನ ಮಿಷನ್ ಕಂಪೌಂಡ್ ನಲ್ಲಿರುವ ಸಿಎಸ್ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ (ಪಾಲಿ ಕ್ಲಿನಿಕ್) ಕಟಪಾಡಿ ಬಸ್ ನಿಲ್ದಾಣ ಬಳಿ ಶನಿವಾರ ಉದ್ಘಾಟನೆಗೊಂಡಿತು.
ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಿ.ಎಸ್.ಐ-ಕರ್ನಾಟಕ ದಕ್ಷಿಣ ಧರ್ಮಪ್ರಾಂತ (ಕೆ.ಎಸ್.ಡಿ)ದ ಬಿಷಪ್ ರೆ. ಹೇಮಚಂದ್ರ ಕುಮಾರ್ ಮಾತನಾಡಿ, ನಗರಗಳಿಗೆ ಮಾತ್ರ ಸೀಮಿತವಾಗಿರದೆ ಗ್ರಾಮೀಣ ಪ್ರದೇಶದ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರಿಗೂ ಪರಿಪೂರ್ಣವಾದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕಟಪಾಡಿಯಂಥ ಗ್ರಾಮೀಣ ಪ್ರದೇಶದಲ್ಲಿ ಸೇವೆ ಆರಂಭಿಸಲಾಗಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಮಾತನಾಡಿ, ಕಟಪಾಡಿಯ ಈ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಸೇವೆ, ಎಕ್ಸ್-ರೇ ಯುನಿಟ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯ ಇವೆ. ವಾರಕ್ಕೆ ಆರು ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಈ ಕೇಂದ್ರ ತೆರೆದಿರುತ್ತದೆ. ಇಲ್ಲಿ ಖಾಯಂ ವೈದ್ಯರೊಂದಿಗೆ ಮಿಷನ್ ಆಸ್ಪತ್ರೆಯ ಎಲ್ಲಾ ವಿಭಾಗಗಳ ತಜ್ಞ ವೈದ್ಯರ ಸೇವೆಯೂ ಲಭ್ಯವಿದೆ ಎಂದರು.
ದೃಷ್ಟಿಯ ಸಾರ್ಥಕತೆ
ಇದು ಕೇವಲ ಕಟ್ಟಡಗಳ ಕೇಂದ್ರ ಅಲ್ಲ. ನಮ್ಮ ದೃಷ್ಟಿಯ ಸಾರ್ಥಕತೆ ಆಗಿದೆ. ನಮ್ಮ ದೃಷ್ಟಿ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿರದೆ ಹಳ್ಳಿ-ಹಳ್ಳಿಗಳಿಗೂ ಹೆಜ್ಜೆ ಇಡುವುದಾಗಿದೆ. ನಮ್ಮ ಸೇವೆ ಸಮುದಾಯ, ಸಮಾಜ, ಪರಿಸರಕ್ಕಾಗಿ ನಡೆಸಲಾಗುವುದು. ಈ ಕೇಂದ್ರ ಸ್ಥಾಪಿಸಿರುವುದು ಜನರ ಸೇವೆಗಾಗಿಯೇ ಹೊರತು ಕೇವಲ ಲಾಭಕ್ಕಾಗಿ ಅಲ್ಲ ಎಂದು ಡಾ.ಜತ್ತನ್ನ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ.ಫೌಸ್ಟಿನ್ ಲೂಕಸ್ ಲೋಬೋ ಮಾತನಾಡಿದರು.
ಕಟಪಾಡಿಯ ಹಿರಿಯ ವೈದ್ಯ ಡಾ.ಎ.ರವೀಂದ್ರನಾಥ ಶೆಟ್ಟಿ, ಕಟಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಉದ್ಯಮಿ ಇಕ್ಬಾಲ್ ಶಂಸುದ್ದೀನ್, ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರಶಾಂತ್ ಜತ್ತನ್ನ, ಅಂಬಾಡಿ ಸಿಎಸ್ಐ ಕ್ರಿಸ್ಟ್ ಚರ್ಚ್ ನ ರೆ.ಅಕ್ಷಯ್ ಅಮ್ಮನ್ನ, ಸಿಎಸ್ಐ ಕೆಎಸ್.ಡಿ ಅಸೋಸಿಯೇಟ್ ಸೆಕ್ರಟರಿ ಸ್ಟೀಫನ್ ಕರ್ಕಡ ಉಪಸ್ಥಿತರಿದ್ದರು.
ಸಿಎಸ್ಐ ಕೆಎಸ್.ಡಿ ಖಜಾಂಚಿ ರೆ.ಐವಾನ್ ಡಿ'ಸೋನ್ಸ್ ಹಾಗೂ ಉಡುಪಿ ಏರಿಯಾ ಚೆಯರ್ ಮೆನ್ ರೆ.ಕಿಶೋರ್ ಕುಮಾರ್ ಪ್ರಾರ್ಥನೆ ನೆರವೇರಿಸಿದರು.
ಎಲ್ಎಂಸಿಓಎನ್ ಪ್ರಾಂಶುಪಾಲೆ ಡಾ.ಸುಜಾ ಕರ್ಕಡ ಸ್ವಾಗತಿಸಿದರು. ಎಲ್ಎಂಎಸ್.ಓಎನ್ ಪ್ರಾಂಶುಪಾಲೆ ವೀಣಾ ಮಿನೇಜಸ್ ವಂದಿಸಿದರು. ನರ್ಸಿಂಗ್ ಟ್ಯೂಟರ್ ಹೇಮಲತಾ ಬಂಗೇರ ನಿರೂಪಿಸಿದರು.
.png)
.png)