ಮಣಿಪಾಲ: ವ್ಯಕ್ತಿಯ ಅಪಹರಣ

ಲೋಕಬಂಧು ನ್ಯೂಸ್ | ಉಡುಪಿ, ಏ.2
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಸುಮಾರು ಏಳೆಂಟು ಮಂದಿ ವ್ಯಕ್ತಿಯೋರ್ವರನ್ನು ಅಪಹರಿಸಿದ ಘಟನೆ ಮಣಿಪಾಲ ಆಸ್ಪತ್ರೆ ಬಳಿ ಗುರುವಾರ ಸಂಭವಿಸಿದೆ.
ಕೊಡ್ಲಾಡಿ ಗ್ರಾಮದ ರಾಮ ಮಡಿವಾಳ ಎಂಬವರು ಸಹೋದರ ಲಕ್ಷ್ಮಣ ಎಂಬವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆ ಹೊರಬದಿಯ ಕ್ಯಾಂಟನ್'ನಲ್ಲಿ ಇನ್ನೋರ್ವ ಸಹೋದರ ರಾಜೇಶ್ ಮತ್ತು ಸುಧೀರ್ ಜೊತೆ ಚಹಾ ಕುಡಿಯುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೆಲ್ವಾಸ್ ಕಾರಿನಲ್ಲಿ ಏಳೆಂಟು ಮಂದಿ ಬಂದು ರಾಜೇಶ್ ಎಂಬವರನ್ನು ಏಕಾಏಕಿ ಹಿಡಿದು ಕಾರಿನಲ್ಲಿ ಕುಳ್ಳಿರಿಸಿ, ಮಣಿಪಾಲದಿಂದ ಹಿರಿಯಡಕ ಕಡೆ ಕರೆದುಕೊಂಡು ಹೋಗಿದ್ದಾರೆ.


ಈ ಹಿಂದೆ ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಹಾಗೂ ವಿಜಯ್ ಎಂಬವರು ರಾಜೇಶ್ ಜೊತೆ ವ್ಯವಹಾರದ ವಿಷಯದಲ್ಲಿ ಮನೆಗೆ ಬಂದಿದ್ದರು. ಅವರೊಂದಿಗೆ ತೆಲಂಗಾಣದಲ್ಲಿ ರಾಜೇಶ್ ವ್ಯವಹಾರ ಹೊಂದಿದ್ದರು. ವ್ಯವಹಾರ ವಿಚಾರದಲ್ಲಿ ಸಹೋದರನ್ನು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವ ಬಗ್ಗೆ ರಾಮ ಮಡಿವಾಳ ಸಂದೇಹ ವ್ಯಕ್ತಪಡಿಸಿದ್ದಾರೆ.


ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.