ಹನುಮ ಜಯಂತಿಯಂದು ಸಾಮೂಹಿಕ ‘ಗದಾಪೂಜೆ’

ಲೋಕಬಂಧು ನ್ಯೂಸ್ ಉಡುಪಿ, ಏ.2
ಯುದ್ಧ ಸ್ಥಿತಿಯಲ್ಲಿ ವಿಜಯ ಕ್ಕಾಗಿ ಹನುಮಂತನ ಧೀಃಶಕ್ತಿ ಸಂಚಯಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಗುರುವಾರ ಹನುಮ ಜಯಂತಿಯಂದು ಉಡುಪಿ ಜಿಲ್ಲೆಯ ವಿವಿಧೆಡೆ ಗದಾಪೂಜೆ ನಡೆಸಲಾಯಿತು.ಇಡೀ ವಿಶ್ವ ಯುದ್ಧದ ಅಂಚಿನಲ್ಲಿ ಬಂದು ನಿಂತಿದೆ. ಇತಿಹಾಸವನ್ನು ಗಮನಿಸಿದರೆ ಯಾವ ಯುದ್ಧಗಳಲ್ಲಿ ಹನುಮಂತ ಇದ್ದನೋ ಅಲ್ಲಿ ವಿಜಯ ನಿಶ್ಚಿತವಾಗಿತ್ತು.


ಪ್ರಭು ಶ್ರೀರಾಮನ ಸೇನೆಯಲ್ಲಿದ್ದು ರಾವಣನ
ಲಂಕೆಯನ್ನು ದಹಿಸಿದ ಹನುಮಂತ ಅಥವಾ ಮಹಾಭಾರತದಲ್ಲಿ ಅರ್ಜುನನ ರಥದ ಧ್ವಜದ ಮೇಲೆ ವಿರಾಜಮಾನನಾಗಿ ಅಧರ್ಮದ ವಿರುದ್ಧ ಪಾಂಡವರಿಗೆ ಬಲ ನೀಡಿದ ಹನುಮಂತ ಹೀಗೆ ಪ್ರತಿಯೊಂದು ಸ್ಥಳದಲ್ಲೂ ವಿಜಯ ಖಚಿತ.


ಅಷ್ಟೇ ಅಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ ಸ್ಥಾಪನೆಗಾಗಿ ಸಮರ್ಥ ರಾಮದಾಸ ಸ್ವಾಮಿಗಳು ಗ್ರಾಮ ಗ್ರಾಮಗಳಲ್ಲಿ ಮಾರುತಿ ಮಂದಿರ ಸ್ಥಾಪಿಸಿ ಪ್ರಾರಂಭಿಸಿದ 'ಬಲೋಪಾಸನೆ'ಯಿಂದಾಗಿ ಸ್ವರಾಜ್ಯಕ್ಕೆ ಆಧ್ಯಾತ್ಮಿಕ ಹಾಗೂ ಸಾಮರ್ಥ್ಯದ ಬಲ ದೊರೆಯಿತು.


ಇಂದು ಮತ್ತೆ ದೇಶ ಮತ್ತು ಧರ್ಮ ಸಂಕಷ್ಟದಲ್ಲಿದೆ ಹಾಗೂ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇಂಥ ಸಮಯದಲ್ಲಿ ಪ್ರತಿಯೊಬ್ಬ ಹಿಂದೂನಲ್ಲಿ ಮಾರುತಿಯಂಥ ಶೌರ್ಯ, ಶಕ್ತಿ ಮತ್ತು
ಭಕ್ತಿಯ ಜಾಗೃತಿಯಾಗಲಿ ಹಾಗೂ ಮುಂಬರುವ ಕಠಿನ ಸಮಯದಲ್ಲಿ ಹನುಮನ ಆಶೀರ್ವಾದದಿಂದ ಹಿಂದೂಗಳ ವಿಜಯ ಖಚಿತವಾಗಲಿ ಎಂಬ ಸಂಕಲ್ಪದೊಂದಿಗೆ ವಿವಿಧ ಹನುಮಂತ ದೇವಸ್ಥಾನಗಳಲ್ಲಿ  ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು.


‘ಗದಾಪೂಜೆ’ಯ ವಿಧಿ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರ ಪಠನ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ‘ಶ್ರೀ ಹನುಮತೇ ನಮಃ’ ಎಂಬ ಸಾಮೂಹಿಕ ನಾಮಜಪ ಮಾಡಲಾಯಿತು.


ಈ ಸಂದರ್ಭದಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬ ವಿಷಯ ಕುರಿತು ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮದ
ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ಸ್ವೀಕರಿಸಲಾಯಿತು.


ಹಿಂದೂ ಜನಜಾಗೃತಿ ಸಮಿತಿ ಕಳೆದ 4 ವರ್ಷಗಳಿಂದ ದೇಶಾದ್ಯಂತ ಸಾಮೂಹಿಕ ‘ಗದಾಪೂಜೆ’ಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದು, ಈ ವರ್ಷವೂ
ಹಿಂದುತ್ವನಿಷ್ಠರು ಮತ್ತು ಶ್ರದ್ಧಾಳುಗಳ ಸಹಭಾಗಿತ್ವದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಹಯೋಗದೊಂದಿಗೆ ಆಚರಿಸಲಾಯಿತು.


ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 850ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಧಾಪೂಜೆ ಹಮ್ಮಿಕೊಳ್ಳಲಾಗಿತ್ತು.