ಯಶಸ್ವಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ

ಲೋಕಬಂಧು ನ್ಯೂಸ್ | ಉಡುಪಿ, ಏ.1
ಸುಮಾರು ನಾಲ್ಕು ವರ್ಷಗಳಿಂದ ಯಕೃತ್ (ಲಿವರ್) ಸಮಸ್ಯೆಯಿಂದ ಬಳಲುತ್ತಿದ್ದ ಕುಂದಾಪುರದ ವ್ಯಕ್ತಿಯೋರ್ವರಿಗೆ ಮೃತ ದಾನಿಯ ಯಕೃತ್ ಜೋಡಿಸುವ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ತಿಳಿಸಿದರು.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ದೀರ್ಘ ಕಾಲದ ಯಕೃತ್ (ಲಿವರ್) ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸುಮಾರು 56 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಯ ವೈದ್ಯರಾದ ಡಾ.ಭರತ್ ಕುಮಾರ್ ಭಟ್ ಮತ್ತವರ ತಂಡ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಡಾ. ಜಯಂತ್ ರೆಡ್ಡಿ ಮತ್ತು ಡಾ.ದೀಪ್ತಿ ಯಶಸ್ವಿ ಕಸಿ ನಡೆಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ರೋಗಿ ಸಂಪೂರ್ಣ ಗುಣಮುಖರಾಗಿ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದರು.


ರೋಗಿ ಮಾತನಾಡಿ, ಜೀವನದಲ್ಲಿ ಭರವಸೆ ಕಳೆದುಕೊಂಡಿದ್ದ ತನಗೆ ಚಿಕಿತ್ಸೆ ಫಲಕಾರಿಯಾಗಿದ್ದು ಅದಕ್ಕಾಗಿ ಶ್ರಮಿಸಿದ ವೈದ್ಯರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.


ಸದ್ಯಕ್ಕೆ ವಾಹನ ಚಾಲನೆ ಹೊರತುಪಡಿಸಿ ಮಿಕ್ಕೆಲ್ಲಾ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.


ಸುದ್ದಿಗೋಷ್ಟಿಯಲ್ಲಿ ಕೆಎಂಸಿ ಮಣಿಪಾಲ ವೈದ್ಯಕೀಯ ನಿರ್ದೇಶಕ ಡಾ.ಅವಿನಾಶ್ ಶೆಟ್ಟಿ, ವೈದ್ಯರಾದ ಡಾ. ಜಯಂತ್ ರೆಡ್ಡಿ, ಡಾ.ದೀಪ್ತಿ, ಡಾ.ಭರತ್ ಕುಮಾರ್ ಶೆಟ್ಟಿ, ಆಸ್ಪತ್ರೆ ಸಿಓಓ ಸುಧಾಕರ್ ಕಂಟಿಪುಡಿ, ಮಾರುಟ್ಟೆ ಪ್ರಬಂಧಕ ಮೋಹನ ಶೆಟ್ಟಿ ಮೊದಲಾದವರಿದ್ದರು.