ತಮಿಳುನಾಡು ಚುನಾವಣೆ: ಬಿಜೆಪಿ ಪಟ್ಟಿ ಪ್ರಕಟ- ಅಣ್ಣಾಮಲೈಗೆ ಕೊಕ್!

ಲೋಕಬಂಧು ನ್ಯೂಸ್ | ಚೆನ್ನೈ, ಏ.3
ಈ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಿಂದ ಬಿಡುಗಡೆಯಾದ ಈ ಪಟ್ಟಿಯಲ್ಲಿ ಹಲವಾರು ಪ್ರಮುಖ ನಾಯಕರ ಹೆಸರಿದೆ. ಆದರೆ, ಅಣ್ಣಾಮಲೈ ಹೆಸರು ಕೈಬಿಟ್ಟಿದೆ!ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.


ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರಿಗೆ ಪಕ್ಷ ಟಿಕೆಟ್ ನೀಡದೆ, ಅವರಿಗೆ ಶಾಕ್ ನೀಡಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಯಿಂದ ಹಾಲಿ ಶಾಸಕಿ ವನತಿ ಶ್ರೀನಿವಾಸನ್ ಪ್ರತಿನಿಧಿಸುವ ಕೊಯಮತ್ತೂರು (ಉತ್ತರ) ಕ್ಷೇತ್ರವನ್ನು ಬಯಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ಇಂದು ಪ್ರಕಟಿಸಿದ ಅಂತಿಮ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.


ಕೇಂದ್ರ ಸಚಿವ ಎಲ್. ಮುರುಗನ್ ಅವರನ್ನು ಅವಿನಾಶಿ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಆದರೆ, ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಮೈಲಾಪುರ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ. ತಮಿಳುನಾಡಿನಲ್ಲಿ ರಾಜಕೀಯವಾಗಿ ತನ್ನ ವ್ಯಾಪ್ತಿ ವಿಸ್ತರಿಸಲು ನೋಡುತ್ತಿರುವ ಬಿಜೆಪಿ ಅನುಭವಿ ಮತ್ತು ಜನಪ್ರಿಯ ನಾಯಕರನ್ನು ನಿರ್ಣಾಯಕ ಕ್ಷೇತ್ರಗಳಲ್ಲಿ ನಿಯೋಜಿಸುವ ಮೂಲಕ ಕಾರ್ಯತಂತ್ರ ರೂಪಿಸುತ್ತಿದೆ.