ಇನಾಂದಾರ್ ಪ್ರಶಸ್ತಿಗೆ 'ತೆರೆದಷ್ಟೂ ಅರಿವು' ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಏ.3
ಖ್ಯಾತ ವಿಮರ್ಶಕ ಪ್ರೊ. ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 'ಇನಾಂದಾರ್ ಪ್ರಶಸ್ತಿ'ಗೆ ಪ್ರಸಿದ್ಧ ಲೇಖಕಿ, ವಿಮರ್ಶಕಿ ಡಾ.ಗೀತಾ ವಸಂತ ಅವರ 'ತೆರೆದಷ್ಟೂಅರಿವು' ವಿಮರ್ಶಾ ಕೃತಿ 2025ನೇ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಏ.15ರಂದು ನಡೆಯುವ ಎಂ.ಜಿ.ಎಂ ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿರುವ ಡಾ.ಗೀತಾ ವಸಂತ ಮೂಲತಃ ಉತ್ತರ ಕನ್ನಡದ ಕಾಟೀಮನೆಯವರು. ಶಿರಸಿಯಲ್ಲಿ ಪದವಿ ಹಾಗೂ ಧಾರವಾಡ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರುವ ಅವರು 'ಸ್ವಾತಂತ್ರ್ಯೋತ್ತರ ಕನ್ನಡ ಮಹಿಳಾ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು' ಮಹಾಪ್ರಬಂಧಕ್ಕೆ ಪಿಎಚ್.ಡಿ ಹಾಗೂ 'ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ' ಪ್ರಬಂಧಕ್ಕೆ ಡಿ.ಲಿಟ್ಪದವಿ ಪಡೆದಿದ್ದಾರೆ.


'ಹೊಸಿಲಾಚೆ ಹೊಸಹೆಜ್ಜೆ' ಅವರ ಮೊದಲ ಕವನ ಸಂಕಲನ. 'ಚೌಕಟ್ಟಿನಾಚೆಯವರು' ಕಥಾಸಂಕಲನ, 'ಬೆಳಕಿನ ಬೀಜ', 'ಹೊಸ ದಿಗಂತ- ಹೊಸದಾರಿ', 'ಬೀಜದೊಳಗಣ ವೃಕ್ಷ', 'ಅಕ್ಷರದಾಹ', 'ತೆರೆದಷ್ಟೂ ಅರಿವು' ಇತ್ಯಾದಿ ವಿಮರ್ಶಾ ಕೃತಿಗಳು.


ಬೇಂದ್ರೆ ಕಾವ್ಯದ ಅವಧೂತ ಪ್ರಜ್ಞೆ, ತುಮಕೂರು ಜಿಲ್ಲೆಯ ಮಹಿಳಾ ಲೇಖಲೋಕ, ಕರ್ನಾಟಕದ ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಅವಧೂತ ಪರಂಪರೆಗಳ ಪ್ರಭಾವ ಇವು ಅವರ ಸಂಶೋಧನೆಗಳು. 'ಅವಳ ಅರಿವು', 'ಕನ್ನಡಕ್ಕೊಬ್ಬರೇ ಗೋಕಾಕರು', 'ಕಂಡವರಿಗಷ್ಟೆ', 'ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಲಕ್ಷಿತ ಲೋಕದ ಸಂಕಥನ' ಇವು ಸಂಪಾದಿತ ಕೃತಿಗಳು.


ಸೃಜನಶೀಲ ಬರವಣಿಗೆ ಜೊತೆಗೆ ವಿಮರ್ಶೆ, ಸ್ತ್ರೀ ಸಂವೇದನೆ, ಸಂಸ್ಕೃತಿ ಚಿಂತನೆಗಳು ಅವರ ಆಸಕ್ತಿಯ ಕ್ಷೇತ್ರಗಳು. ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳ ಅಂಕಣಕಾರರಾಗಿದ್ದಾರೆ.


ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಡಾ.ಪಾಟೀಲ ಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪುರಸ್ಕಾರ, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.