ನಡೆಸದ ಚುನಾವಣೆ: ಹಣಕಾಸು ಬಿಡುಗಡೆಗೆ ತಡೆ

ಲೋಕಬಂಧು ನ್ಯೂಸ್ | ಉಡುಪಿ, ಏ.3
ಕರ್ನಾಟಕ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಸಕಾಲದಲ್ಲಿ ನಡೆಸಿಲ್ಲವಾದ್ದರಿಂದ 15ನೇ ಹಣಕಾಸು ಆಯೋಗದ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರಗಳಿಗೆ ಹಣ ಬಿಡುಗಡೆ ಮಾಡಲು ಅವಕಾಶವಿಲ್ಲ. ಮತ್ತು ರಾಜ್ಯದಲ್ಲಿ ಸಮರ್ಪಕ ಚುನಾಯಿತ ಸ್ಥಳೀಯಾಡಳಿತ ಸಂಸ್ಥೆಗಳು ಅಧಿಕಾರದಲ್ಲಿದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
2020- 2021ರಿಂದ 2024- 25ರ ಅವಧಿಗೆ ಸಂಬಂಧಿಸಿದ 15ನೇ ಹಣಕಾಸು ಆಯೋಗದ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಅನುದಾನದ ಎಲ್ಲಾ ಕಂತುಗಳನ್ನು ಕರ್ನಾಟಕದ ಅರ್ಹ ಗ್ರಾಮ ಪಂಚಾಯತ್'ಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಪಂಚಾಯತ್'ಗಳಿಗೆ ವಿಳಂಬವಾಗಿ ಹಾಗೂ ಅಪೂರ್ಣವಾಗಿ ವರ್ಗಾವಣೆ ಮಾಡಿರುವುದರಿಂದ ಮತ್ತು ವಿಳಂಬ ವರ್ಗಾವಣೆಗೆ ಸಂಬಂಧಿಸಿದ ದಂಡ ಬಡ್ಡಿಯನ್ನು ಬಿಡುಗಡೆ ಮಾಡದಿರುವ ವ್ಯತ್ಯಾಸ ಕಂಡುಬರುತ್ತಿದೆ.


15ನೇ ಹಣಕಾಸಿನ ಆಯೋಗದಂತೆ ಪ್ರತಿ ಹಣಕಾಸು ವರ್ಷದಲ್ಲಿ ಎರಡು ಕಂತುಗಳ ಮೂಲಕ ರಾಜ್ಯಗಳಿಗೆ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿದೆ. ಹಾಗೆ ಬಿಡುಗಡೆ ಮಾಡಿದ ಕಂತುಗಳಿಗೆ ನಿಗದಿತ ನಮೂನೆಯಲ್ಲಿ ಅನುದಾನ ವರ್ಗಾವಣೆ ಪ್ರಮಾಣ ಪತ್ರವನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಪಂಚಾಯತ್'ರಾಜ್ ಇಲಾಖೆ ಸಂಸದ ಕೋಟ ಶ್ರೀನಿವಾಸ  ಪೂಜಾರಿ ಅವರಿಗೆ ಲಿಖಿತವಾಗಿ ತಿಳಿಸಿದೆ.


ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರಕಾರಕ್ಕೆ 15ನೇ ಹಣಕಾಸು ಆಯೋಗದ ಹಣ ಪಾವತಿ ಮಾಡಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಸದ ಕೋಟ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಸಚಿವಾಲಯ ಲಿಖಿತ ಉತ್ತರ ನೀಡಿದೆ.