ಲೋಕಬಂಧು ನ್ಯೂಸ್ | ಉಡುಪಿ, ಏ.13
ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟಿಯಲ್ಲಿ ಏ. 9ರಿಂದ ತಡೆಗೋಡೆಯೊಂದಿಗೆ ರಸ್ತೆ ಅಗಲಗೊಳಿಸುವ ಕಾಮಗಾರಿಯ ಬಾಕಿ ತಳಪಾಯದ ಕಾಮಗಾರಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸುಮಾರು 12 ಮೀ. ಎತ್ತರದಲ್ಲಿ ಪ್ರಸುತ ಇರುವ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಸುಮಾರು 5 ಅಡಿ ಅಗಲದ ವರೆಗೆ ಮತ್ತೊಮ್ಮೆ ಭೂಕುಸಿತ ಉಂಟಾಗಿ ಕಾಂಕ್ರಿಟ್ ರಸ್ತೆಯ ಮೇಲ್ಮೈನಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡುಬಂದಿದ್ದು, ಸುರಕ್ಷತಾ ದೃಷ್ಟಿಯಿಂದ ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್ಪಿನ್ ತಿರುವಿನಲ್ಲಿ ಪ್ರಸ್ತುತ ಕೈಗೊಳ್ಳುತ್ತಿರುವ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ.
ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ 52ರಲ್ಲಿ ಸಂಚರಿಸುವ ವಾಹನಗಳು ತೀರ್ಥಹಳ್ಳಿಯಿಂದ ಕುಂದಾಪುರ ಕಡೆ ಹೋಗುವ (ತೀರ್ಥಹಳ್ಳಿ- ರಾವೆ- ಕಾನುಗೋಡು- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ದಾಪುರ ಮೂಲಕ ಕುಂದಾಪುರ ಹಾಗೂ ತೀರ್ಥಹಳ್ಳಿ- ರಾವೆ- ಕಾನುಗೋಡು- ನಗರ- ಕೊಲ್ಲೂರು- ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.
ಸಿದ್ದಾಪುರ ರಾಜ್ಯ ಹೆದ್ದಾರಿ 278 ರಸ್ತೆಯ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ (ತೀರ್ಥಹಳ್ಳಿ- ಯಡೂರು- ಸುಳುಗೋಡು- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ದಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ತೀರ್ಥಹಳ್ಳಿ- ಯಡೂರು- ಮಾಸ್ತಿಕಟ್ಟೆ- ಕಾನುಗೋಡು- ನಗರ -ಕೊಲ್ಲೂರು- ಕುಂದಾಪುರ ರಸ್ತೆ ಮೂಲಕ ಸಂಚರಿಸಬೇಕು.
ಶಿವಮೊಗ್ಗ ಮತ್ತು ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರ ಕಡೆ ಹೋಗುವ (ಶಿವಮೊಗ್ಗ- ಸಾಗರ ಕಡೆಯಿಂದ ಹೊಸನಗರ- ನಗರ- ಮಾಸ್ತಿಕಟ್ಟೆ- ಹುಲಿಕಲ್ ಘಾಟ್- ಹೊಸಂಗಡಿ- ಸಿದ್ಧಾಪುರ ಮೂಲಕ ಕುಂದಾಪುರ ಸೇರುವ ರಸ್ತೆ) ವಾಹನಗಳು ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ, ಬಳಿಕ ಹೊನ್ನಾವರದಿಂದ- ಭಟ್ಕಳ- ಬೈಂದೂರು ಕುಂದಾಪುರ ರಸ್ತೆ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
