ಲೋಕಬಂಧು ನ್ಯೂಸ್ | ಉಡುಪಿ, ಏ.10
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 2024-25ರಲ್ಲಿ 302 ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, 490 ಗೃಹ ಬಳಕೆ ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ. ಸೋಲಾರ್ ಅಳವಡಿಕೆಯಲ್ಲಿ 2025- 26ರಲ್ಲಿ 240 ಮನೆಗಳಿಗೆ ಸೋಲಾರ್ ಅಳವಡಿಕೆಗೆ ಗುರಿ ನಿಗದಿಪಡಿಸಿದ್ದು, ನಿಗದಿತ ಗುರಿಗಿಂತ ಹೆಚ್ಚಾಗಿ 868 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಅದರಿಂದ ಉಡುಪಿ ಜಿಲ್ಲೆಯಲ್ಲಿ ಪಿ.ಎಮ್. ಸೂರ್ಯ ಘರ್ ಯೋಜನೆಯಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮನೆಗಳ ಮೇಲ್ಛಾವಣಿ ಮೇಲೆ ಪಿ.ಎಮ್ ಸೂರ್ಯ ಘರ್ ಯೋಜನೆಯಡಿ ಸೋಲಾರ್ ವಿದ್ಯುತ್ ಅಳವಡಿಕೆ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಶುಕ್ರವಾರ ಮೆಸ್ಕಾಂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ 4,546 ಅರ್ಜಿಗಳು ಸೋಲಾರ್ ಅಳವಡಿಕೆಗೆ ಪ್ರಸ್ತಾಪನೆ ಸಲ್ಲಿಸಿದ್ದು, ಅದರಲ್ಲಿ 1,258 ಮನೆಗಳಿಗೆ ಸೋಲಾರ್ ಸಬ್ಸಿಡಿ ಮಂಜೂರಾಗಿದೆ. 1,280 ಕುಟುಂಬಗಳಿಗೆ ತಲಾ 78 ಸಾವಿರ ರೂ.ನಂತೆ ಸಬ್ಸಿಡಿ ನೀಡಲಾಗಿದ್ದು, ಆ ಪೈಕಿ ಒಟ್ಟಾರೆ 9.98 ಕೋ. ರೂ. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಬೈಂದೂರು ತಾಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರದ ಕಾವಡಿ, ಕಾಪುವಿನ ಬೆಳ್ಳೆಗಳಲ್ಲಿ ಕುಸುಮ್-ಸಿ ಯೋಜನೆಯಡಿ ಸೋಲಾರ್ ಪ್ಲ್ಯಾಂಟ್ ಅಳವಡಿಸಿ ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ 40 ಕೋ. ರೂ. ಮಂಜೂರು ಮಾಡಿದೆ. 2026ರ ಮಾರ್ಚ್ ತಿಂಗಳಿಗೆ ಕುಸುಮ್-ಸಿ ಯೋಜನೆ ಅನುಷ್ಠಾನದ ಗಡುವು ನೀಡಿದ್ದು, ಅದನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಮೇ ವರೆಗೆ ವಿಸ್ತರಿಸಲಾಗಿದೆ ಎಂದು ಸಂಸದ ಕೋಟ ಹೇಳಿದರು.
ತೊಂದರೆ ನೀಡದಂತೆ ಅರಣ್ಯ ಇಲಾಖೆಗೆ ತಾಕೀತು
ಸಾಮಾಜಿಕ ಅರಣ್ಯದ ನೆಪವೊಡ್ಡಿ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ತೊಂದರೆ ಕೊಡುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕೋಟ, ಆ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದು ಅವರ ನಿರ್ದೇಶನವನ್ನೂ ಅರಣ್ಯ ಇಲಾಖೆ ಪಾಲಿಸುತ್ತಿಲ್ಲ ಎಂಬ ವಿಚಾರ ತೀವ್ರ ಚರ್ಚೆಯಾಯಿತು.
ದೂರವಾಣಿ ಮೂಲಕ ಅರಣ್ಯ ಇಲಾಖೆ ಮುಖ್ಯಸ್ಥರು, ಕಂದಾಯ ಇಲಾಖೆ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿದ ಸಂಸದ ಕೋಟ, ಅಭಿವೃದ್ದಿ ಕೆಲಸಕ್ಕೆ ತೊಂದರೆ ಕೊಡಬೇಡಿ. ಕೇಂದ್ರ ಸರ್ಕಾರದ ನೂರಾರು ಕೋಟಿ ರೂ. ಹಣ ವಾಪಾಸಾಗದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಮೆಸ್ಕಾಂ ಅಧೀಕ್ಷಕ ರಾಕೇಶ್, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್, ಯೋಜನೆಯ ಅನುಷ್ಠಾನದ ಸದಸ್ಯ ಶೇಖರ್ ಇದ್ದರು.
