ಲೋಕಬಂಧು ನ್ಯೂಸ್ | ಮುಂಬೈ, ಏ.12
ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಂಸ್ಲೆ ಭಾನುವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ತೀವ್ರ ಉಸಿರಾಟದ ಸಮಸ್ಯೆ ಮತ್ತೆ ಎದೆನೋವಿನಿಂದಾಗಿ ಶನಿವಾರ ಇಲ್ಲಿನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದರು.
ಬ್ರಿಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ, ಡಾ. ಪ್ರತೀಕ್ ಸಂಧಾನಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ಆಶಾ ಭೋಂಸ್ಲೆ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ನಿಧನ ಹೊಂದಿದ್ದಾರೆ ಎಂದಿದ್ದಾರೆ.
ಆಶಾ ಭೋಂಸ್ಲೆ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಚಿತ್ರರಂಗದ ಗಣ್ಯರು, ಸಂಗೀತ ಕ್ಷೇತ್ರದ ಸೆಲೆಬ್ರಿಟಿಗಳು, ಆಶಾ ಭೋಸ್ಲೆ ಅವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದರು, ಆದರೆ, ಪ್ರಾರ್ಥನೆ ಫಲ ನೀಡಿಲ್ಲ.
ಆಶಾ ಭೋಂಸ್ಲೆ ಅವರು ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮೀಸ್, ಭೋಜ್ಪುರಿ, ನೇಪಾಳಿ, ಬೆಂಗಾಲಿ ಇನ್ನೂ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಏಷ್ಯಾ ನೈಟಿಂಗೇಲ್, ಲತಾ ಮಂಗೇಶ್ಕರ್ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಆಶಾ ಅವರ ಹಾಡುಗಳು ಮೂರು ಬಾರಿ ಪ್ರತಿಷ್ಠಿತ ಗ್ರಾಮಿಗೆ ನಾಮಿನೇಟ್ ಸಹ ಆಗಿದ್ದವು. ಸುಮಾರು ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ.
