ಕಾರ್ಮಿಕರಿಂದ ಕಪ್ಪುದಿನ ಆಚರಣೆ

ಲೋಕಬಂಧು ನ್ಯೂಸ್ | ಉಡುಪಿ, ಏ.1
ಕೇಂದ್ರ ಸರಕಾರ ಜಾರಿಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಸೆಂಟ್ರಲ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ದೇಶಾದ್ಯಂತ ಕಪ್ಪುದಿನ ಆಚರಣೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಉಡುಪಿ ಜಿಲ್ಲೆಯಲ್ಲಿಯೂ ದುಡಿಯುವ ವರ್ಗದ ಕಾರ್ಮಿಕರು ಕಪ್ಪುದಿನ ಆಚರಿಸಿದರು.ಉಡುಪಿ ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರು ತಮ್ಮ ಕೆಲಸದ ಸ್ಥಳ, ಫ್ಯಾಕ್ಟರಿ, ಕಂಪನಿಗಳ ಮುಂದೆ ಎಲ್ಲಾ ವರ್ಗದ ಕಾರ್ಮಿಕರು ಪ್ರತಿಭಟನೆ ನಡೆಸಿ ಕಪ್ಪು ದಿನ ಆಚರಣೆ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.


ಉಡುಪಿಯಲ್ಲಿ ಸಿಐಟಿಯು ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಬಸ್ ನಿಲ್ದಾಣ ಬಳಿ ಕಾರ್ಮಿಕಕರು ಪ್ರತಿಭಟನೆ ನಡೆಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ ಮಾತನಾಡಿ ಕೇಂದ್ರ ಸರಕಾರ ಜಾರಿ ಮಾಡಿರುವ ಕಾರ್ಮಿಕ 4 ಸಂಹಿತೆಗಳಿಂದ ಕಾರ್ಮಿಕಕರು ಬೀದಿಗೆ ಬೀಳುವಂತಾಗಿದೆ. ಕಾರ್ಮಿಕರಿಗೆ ಇನ್ನು ಮುಂದೆ ಸವಲತ್ತುಗಳು ಸಿಗಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ.


ಕೆಲಸದ ಅವಧಿಯ ಹೆಚ್ಚಳ, ಕಾಮರ್ಿಕರ ಮುಷ್ಕರದ ಹಕ್ಕುಗಳನ್ನು ದುರ್ಬಲಗೊಳಿಸಿರುವುದು, ಕಾರ್ಮಿಕ ಸಂಘಗಳ ನೋಂದಾವಣೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆವಕಾಶ ನೀಡಿದ್ದು ಅವರಿಗೆ ಸರಿಯಾದ ಸುರಕ್ಷತೆ, ಭದ್ರತೆ ಇಲ್ಲವಾಗಿದೆ ಎಂದರು.


ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿದರು.


ಜಿಲ್ಲಾ ಬೀಡಿ ಸಂಘದ ಉಡುಪಿ ಅಧ್ಯಕ್ಷೆ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ಸರೋಜ, ಎಸ್ಸಿಐಟಿಯು ಮುಖಂಡರಾದ ಮೋಹನ್, ಗಿರಿಜಾ, ವಸಂತಿ, ಕಟ್ಟಡ ಸಂಘದ ಮುಖಂಡರಾದ ಸಾರಿಕಾ, ಶರ್ಮಿಳ, ಸೌಮ್ಯ, ಶಾರದ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ನಿರೂಪಿಸಿದರು.