ಲೋಕಬಂಧು ನ್ಯೂಸ್ | ಉಡುಪಿ, ಜೂ.17
ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜೂನ್ 23ರಿಂದ 29ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದರು.
ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಜೂ.30ರಿಂದ ಜು.29ರ ವರೆಗೆ ನಡೆಯಲಿದ್ದು, ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಬಿಎಲ್ಎ1, ಬಿಎಲ್ಎ2 ಹಾಗೂ ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದಾರೆ ಎಂದರು.
ರಾಜ್ಯಾದ್ಯಂತ ಎಸ್ಐಆರ್ ಕುರಿತು ಮನೆ ಮನೆಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸವೂ ನಡೆಯಲಿದೆ ಎಂದರು. ಎಸ್ಐಆರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಉಡುಪಿ ಜಿಲ್ಲೆಯ 1,111 ಮತಗಟ್ಟೆಗಳಲ್ಲೂ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು ಎಂದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಹೊಸ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗುವುದು ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿದರು. ಪಕ್ಷಾಂತರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ಎಸ್ಐಆರ್ ಜಾರಿಯಾಗಿದ್ದು ಲಕ್ಷಾಂತರ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರು, ಎಸ್ಸಿ ಹಾಗೂ ಎಸ್ಟಿ ಸಮುದಾಯಗಳನ್ನು ಗುರಿಯಾಗಿಸಿ ಮತದಾರರ ಸಮುದಾಯಗಳನ್ನು ಗುರಿಯಾಗಿಸಿ ಮತದಾರರ ಹೆಸರನ್ನು ತೆಗೆದುಹಾಕಲಾಗುತ್ತಿದೆ ಎಂದರು.
ಜೂ.21ರಂದು ನಡೆಯುವ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮಕ್ಕೆ ಜಿಲ್ಲೆಯ ಪ್ರತೀ ಬೂತ್'ಗಳಿಂದ 100 ಮಂದಿ ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ ಮಣಿಪಾಲ, ಅಲೆವೂರು ಹರೀಶ್ ಕಿಣಿ, ಎಸ್. ರಾಜು ಪೂಜಾರಿ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಸುಬೋಧ ರಾವ್, ಸಂತೋಷ್ ಕುಲಾಲ್, ವೈ.ಸುಕುಮಾರ್, ಗೋಪಿನಾಥ್ ಭಟ್, ಪ್ರಶಾಂತ್ ಜತ್ತನ್ನ ಹಾಗೂ ಕಿಶೋರ್ ಎರ್ಮಾಳು ಉಪಸ್ಥಿತರಿದ್ದರು.
