ಲೋಕಬಂಧು ನ್ಯೂಸ್ | ಉಡುಪಿ, ಜೂ.24
ಈ ಬಾರಿಯ ಎಸ್ಎಸ್ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಜೂ.26ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏಳೆಂಟು ವರ್ಷಗಳಿಂದ ಜಿಲ್ಲಾ ಸಂಸ್ಥೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಬಾರಿ ಜಿಲ್ಲೆಯ ಸುಮಾರು 1,200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪುರಸ್ಕಾರ ಪ್ರಶಸ್ತಿ ಪತ್ರ ಹಾಗೂ ತಲಾ ಒಂದು ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ ಎಂದರು.
ಸಮಾರಂಭವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ.ಪಿ.ಜಿ.ಆರ್. ಸಿಂಧ್ಯಾ ಉದ್ಘಾಟಿಸಲಿದ್ದು, ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು ಎಂದವರು ಮಾಹಿತಿ ನೀಡಿದರು.
ಜೂ. 27ರಿಂದ ರಾಜ್ಯ ಮಟ್ಟದ ವಿಶೇಷ ಶಿಬಿರ
ಇದೇ ಸಂದರ್ಭದಲ್ಲಿ ಜೂ. 27ರಿಂದ 29ರ ವರೆಗೆ ಆತ್ರಾಡಿ ವಂಡ್ಲೆಯ 'ವಿಜಯ ಮಕ್ಕಳ ಕೂಟ'ದಲ್ಲಿ ರಾಜ್ಯ ಮಟ್ಟದ 'ಏಕತಾ" ಸಾಮಾಜಿಕ ಸಾಮರಸ್ಯ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಜಯಕರ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಕಾರ್ಯದರ್ಶಿ ಆನಂದ ಬಿ. ಅಡಿಗ, ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ ಹಾಗೂ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ ಶೇಖರ್ ಇದ್ದರು.