ಧರ್ಮಸ್ಥಳಕ್ಕೆ ಕಳಂಕ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು!

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.11
ಬಹುಚರ್ಚಿತ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಹಲವು ಸ್ಫೋಟಕ ಆರೋಪಗಳನ್ನು ಮಾಡಿದ್ದು, ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿರುವುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯ ಪ್ರಕಾರ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಮಾರು 200 ಕೋಟಿ ರೂ. ವೆಚ್ಚದ ಬೃಹತ್ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಆ ಸಂಚಿನ ಭಾಗವಾಗಿ ತನಗೆ 75 ಲಕ್ಷ ರೂ. ಹಣದ ಆಮಿಷ ಒಡ್ಡಲಾಗಿತ್ತು ಹಾಗೂ ಕೇರಳದಿಂದ ಹಣಕಾಸಿನ ನೆರವು ಬಂದಿರುವ ಬಗ್ಗೆ ಮಾಹಿತಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಲಾಗಿದೆ.


ಅರ್ಜಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್ ಸೇರಿದಂತೆ ಹಲವರ ಹೆಸರು ಉಲ್ಲೇಖಿಸಿರುವ ಚಿನ್ನಯ್ಯ, ತಾನು ಒತ್ತಡ ಮತ್ತು ಬೆದರಿಕೆಯ ನಡುವೆ ಹೇಳಿಕೆ ನೀಡುವಂತೆ ಮಾಡಲಾಗಿತ್ತು ಎಂದು ದೂರಿದ್ದಾನೆ. ಅಲ್ಲದೆ, ನಟ ಪ್ರಕಾಶ್ ರಾಜ್ ಹೆಸರೂ ಅರ್ಜಿಯಲ್ಲಿ ಪ್ರಸ್ತಾಪಗೊಂಡಿದೆ ಎಂದು ವರದಿಯಾಗಿದೆ.


ಅರ್ಜಿಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ನೋಟಿಸ್ ಜಾರಿ ಮಾಡಿದ್ದು ತನಿಖೆಯ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಲಾಗಿದೆ.


ಪ್ರಕರಣದ ಆರೋಪಗಳು ಮತ್ತು ಅರ್ಜಿಯಲ್ಲಿನ ಹೇಳಿಕೆಗಳು ಇನ್ನಷ್ಟೇ ನ್ಯಾಯಾಂಗ ಪರಿಶೀಲನೆಗೆ ಒಳಪಡಬೇಕಿದ್ದು, ಆ ಕುರಿತು ಸಂಬಂಧಪಟ್ಟ ವ್ಯಕ್ತಿಗಳ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಪ್ರಕರಣದ ಸತ್ಯಾಸತ್ಯತೆ ಕುರಿತು ಅಂತಿಮ ನಿರ್ಧಾರ ನ್ಯಾಯಾಲಯ ಹಾಗೂ ತನಿಖಾ ಸಂಸ್ಥೆಗಳ ವರದಿಯ ನಂತರವೇ ಸ್ಪಷ್ಟವಾಗಲಿದೆ.