ಲೋಕಬಂಧು ನ್ಯೂಸ್ ಬೆಂಗಳೂರು, ಜೂ. 6
ಮುಂಬೈನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿಹಬ್ಬ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಮಂತ್ರಿಸಲಾಯಿತು.ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹಾಗೂ ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಅವರು ಜೂ. 4ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಆಗಸ್ಟ್‌ನಲ್ಲಿ ನಡೆಯುವ ಸಮಿತಿಯ ಬೆಳ್ಳಿಹಬ್ಬ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು.
ಕಳೆದ 25 ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಸರ ಸಂರಕ್ಷಣೆ, ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ವೃದ್ಧಿ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಸಮಿತಿ ಮಹತ್ವದ ಕೊಡುಗೆ ನೀಡಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ ಕಲ್ಪಿಸಲು ರನ್‌ವೇ ವಿಸ್ತರಣೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ನಂದಿಕೂರು ವಿದ್ಯುತ್ ಯೋಜನೆ ಅನುಷ್ಠಾನ, ಮಂಗಳೂರು–ಬೆಂಗಳೂರು ರೈಲು ಮಾರ್ಗದ ಬ್ರಾಡ್ ಗೇಜ್ ಪರಿವರ್ತನೆ ಹಾಗೂ ಪುನರಾರಂಭ, ಮಂಗಳೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸೇರಿದಂತೆ ಹಲವಾರು ಪ್ರಮುಖ ಅಭಿವೃದ್ಧಿ ಕಾರ್ಯಗಳಲ್ಲಿ ಸಮಿತಿ ಸಕ್ರಿಯ ಪಾತ್ರವಹಿಸಿದೆ.
ಅಲ್ಲದೆ, ಮಾಜಿ ರಕ್ಷಣಾ ಸಚಿವ ಹಾಗೂ ಎನ್‌ಡಿಎ ಸಂಚಾಲಕರಾಗಿದ್ದ ಪದ್ಮವಿಭೂಷಣ ದಿ.ಜಾರ್ಜ್ ಫರ್ನಾಂಡಿಸ್ ಹಾಗೂ ವಿವಿಧ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮುಂಬಯಿ–ಮಂಗಳೂರು ಗರೀಬ್ ರಥ್ ರೈಲು ಸೇವೆ ಆರಂಭಿಸುವಲ್ಲಿಯೂ ಸಮಿತಿಯ ಪ್ರಯತ್ನ ಗಮನಾರ್ಹ ಎಂಬುದನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಯಿತು.
ಮುಖ್ಯಮಂತ್ರಿ ಡಿಕೆಶಿ ಅವರು ಸಮಿತಿಯ ಕಳೆದ 25 ವರ್ಷಗಳ ಸಮಾಜಮುಖಿ ಹಾಗೂ ಪರಿಸರ ಪರ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಸಮಿತಿಯ ಆಹ್ವಾನ ಸ್ವೀಕರಿಸಿದರು.