ಲೋಕಬಂಧು ನ್ಯೂಸ್ ಉಡುಪಿ, ಜೂ.21
ಸಹಕಾರ ಸಪ್ತಾಹವನ್ನು ನ.14 ಬದಲಾಗಿ ಜೂ.26ರಿಂದ ಒಂದು ವಾರ ಕಾಲ ಆಚರಿಸಲು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರ ನೆಹರೂ ಕೊಡುಗೆಯನ್ನು ನಿರ್ಲಕ್ಷಿಸುವ ಹುನ್ನಾರ ನಡೆಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಅಲೆವೂರು ಹರೀಶ್ ಕಿಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ವತಂತ್ರ ಭಾರತದ ಅಭ್ಯುದಯದಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ದೇಶದ ಮೊದಲ ಪ್ರಧಾನಿ ಪಂ. ಜವಹರಲಾಲ್ ನೆಹರೂ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಿದ್ದರು. ಆ ಕಾರಣಕ್ಕಾಗಿ ಅವರ ಜನ್ಮ ದಿನಾಂಕವಾದ ನವೆಂಬರ್ 14ರಿಂದ ಒಂದು ವಾರ ಕಾಲ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಕಳೆದ 7 ದಶಕಗಳಿಂದ ಆಚರಿಸಲಾಗುತ್ತಿದೆ. ಆದರೆ, ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನ ಸಹಕಾರಿ ಸಚಿವಾಲಯ ಆರಂಭಿಸಿ 5 ವರ್ಷ ಕಳೆದಿರುವ ಹೆಸರಿನಲ್ಲಿ ಜೂನ್ 26 ರಿಂದ ಜುಲೈ 6ರ ವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಿದೆ.
ಈ ದಿನಾಂಕ ಬದಲಾವಣೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹರೀಶ್ ಕಿಣಿ, ಇದು ನೆಹರೂ ಅವರನ್ನು ಅವಮಾನಿಸುವ ಬಿಜೆಪಿ ಸರ್ಕಾರದ ಮುಂದುವರಿದ ಚಾಳಿ. ನೆಹರೂ ಕೊಡುಗೆಗಳನ್ನು ಕ್ಷೀಣಗೊಳಿಸಲು ನಡೆಸಿರುವ ಹುನ್ನಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಹೆಸರನ್ನು ಬದಲಾಯಿಸಿ ವಿಜಿ-ರಾಮ್ ಜಿ ಎಂದು ಮಹಾತ್ಮಾ ಗಾಂಧೀಜಿ ಹೆಸರನ್ನು ಅಳಿಸಲು ನಡೆಸಿದ ಪ್ರಯತ್ನದ ಇನ್ನೊಂದು ಮಜಲು ಎಂದು ಕಿಣಿ ತಿಳಿಸಿದ್ದಾರೆ.
ಸಹಕಾರ ಸಪ್ತಾಹದ ದಿನಾಂಕ ಬದಲಿಸದೇ ನ. 14ರಂದೇ ಆರಂಭಿಸಬೇಕು ಎಂದು ಆಗ್ರಹಿಸಿರುವ ಅವರು, ಈ ಕುರಿತು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಸಂಘಗಳ ನಿಬಂಧಕರು ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಯೂನಿಯನ್ ಗಳಿಗೆ ನೀಡಿರುವ ಆದೇಶವನ್ನು ಹಿಂಪಡೆಯುವ ಸೂಚನೆ ನೀಡುವಂತೆ ಹರೀಶ ಕಿಣಿ ಆಗ್ರಹಿಸಿದ್ದಾರೆ.