ಲೋಕಬಂಧು ನ್ಯೂಸ್ | ಉಡುಪಿ, ಜೂ.16
ಉಡುಪಿಯವರು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ನೆಲದ ಮತ್ತು ಪದ್ಧತಿಗಳ ಬಾಂಧವ್ಯದ ಬೆಸುಗೆಯನ್ನು ಕಾಣಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ರಾಜಾಜಿ ನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಸೋಮವಾರ ಕಲ್ಯಾಣಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ 'ವಿಜಯ ಕರ್ನಾಟಕ' ಉಡುಪಿ ಜಿಲ್ಲಾ ವರದಿಗಾರ ಸುಬ್ರಮಣ್ಯ ಜಿ. ಭಟ್ ಕುರ್ಯ (ಸುಜಿ ಕುರ್ಯ) ಅವರಿಗೆ 'ಯಶೋ ಮಾಧ್ಯಮ' ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.
ಉಡುಪಿಯಲ್ಲಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳು ಅದು ಸಣ್ಣದಿರಲಿ, ದೊಡ್ಡದಿರಲಿ, ತುಂಬಾ ಅರ್ಥಪೂರ್ಣವಾಗಿರುತ್ತದೆ ಎಂದರು.
ಬೆಂಗಳೂರಿನ ಸ್ಪಂದನ ಸೇವಾ ಸಂಸ್ಥೆ ಈ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸುತ್ತಿರುವುದು ಶ್ಲಾಘನೀಯ. ಹಿರಿಯ ಪತ್ರಕರ್ತರನ್ನು ಗೌರವಿಸುವುದು ಸಂತೋಷದಾಯಕ ಎಂದರು.
ಅಭ್ಯಾಗತರಾಗಿದ್ದ ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು ಮಾತನಾಡಿ, ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸಮಯೋಚಿತ ಕಾರ್ಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸುಜಿ ಕುರ್ಯ ಶುಭ ಹಾರೈಸಿದರು.
ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮರಾಯ ಕಿಣಿ ಮಾತನಾಡಿ, ಕಳೆದ ಸುಮಾರು 18 ವರ್ಷದಿಂದ ಸ್ಪಂದನ ಸೇವಾ ಸಂಸ್ಥೆ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ, ಗಿಡ ನೆಡುವ ಕಾರ್ಯಕ್ರಮದಂಥ ಸಮಾಜ ಮೆಚ್ಚುವ ಕಾರ್ಯ ಮಾಡುತ್ತಿದೆ ಎಂದರು.
ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಕಾರಂತ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್'ನ ಸಹಾಯಕ ಪ್ರಾಧ್ಯಾಪಕಿ ಡಾ.ಮರಿಯಾ ಪಾಯಸ್, ಕಲ್ಯಾಣಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ ಸ್ಪಂದನ ಸೇವಾ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ರಾಘವೇಂದ್ರ ಪ್ರಭು ಕರ್ವಾಲು ನೇತೃತ್ವದಲ್ಲಿ ನಡೆದ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಸುತ್ತಮುತ್ತ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಜಿ.ಎಸ್.ಬಿ ಸಮುದಾಯದ ರುದ್ರಭೂಮಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಾಜಸೇವಕ ಪ್ರಕಾಶ ಕಾಮತ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಆಡಳಿತ ಮಂಡಳಿ ಸದಸ್ಯರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುಮನ ಪೈ, ಸ್ಪಂದನಾ ಸೇವಾ ಸಂಸ್ಥೆ ಅಧ್ಯಕ್ಷ ಪತ್ರಕರ್ತ ವೆಂಕಟೇಶ್ ಪೈ, ಖಜಾಂಚಿ ರಜನಿ ವಿ. ಪೈ, ಶಾಲಾ ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಶೆಟ್ಟಿ, 'ಯೂತ್ ಆಫ್ ಜಿ.ಎಸ್.ಬಿ' ಸದಸ್ಯ ಅಜಿತ್ ಪೈ ಮೊದಲಾದವರಿದ್ದರು.
ವೆಂಕಟೇಶ್ ಪೈ ಸ್ವಾಗತಿಸಿ, ಸಂತೋಷ್ ಕಾಮತ್ ವಂದಿಸಿದರು.