ಸಾಂಸ್ಕೃತಿಕ ಅಸ್ಮಿತೆಗೆ ಸರಕಾರದಿಂದ ದ್ರೋಹ

ಲೋಕಬಂಧು ನ್ಯೂಸ್ | ಕಾರ್ಕಳ, ಜೂ.22
ಇಲ್ಲಿನ ಯಕ್ಷ ರಂಗಾಯಣ ಕೇಂದ್ರದ ಹೆಸರನ್ನು ರಾಜ್ಯ ಸರಕಾರ ಏಕಾಏಕಿ ಕರಾವಳಿ ರಂಗಾಯಣ ಎಂದು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ. ಆ ಮೂಲಕ ಕರಾವಳಿಯ ಸಾಂಸ್ಕೃತಿಕ ಅಸ್ಮಿತೆಗೆ ದ್ರೋಹ ಎಸಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವ ವಿಖ್ಯಾತ ಯಕ್ಷಗಾನ ಮತ್ತು ನಾಟಕ ರಂಗದ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಮಹತ್ತರ ದೂರದೃಷ್ಟಿಯೊಂದಿಗೆ ಕಾರ್ಕಳದಲ್ಲಿ ಯಕ್ಷ ರಂಗಾಯಣ ಆರಂಭಿಸಲಾಗಿತ್ತು. ಹೆಸರು ಬದಲಿಸುವ ಈ ದಿಢೀರ್ ಮತ್ತು ದುರುದ್ದೇಶಪೂರಿತ ನಡೆ ಇಡೀ ಕರಾವಳಿಯ ಯಕ್ಷಗಾನ ಕಲೆ, ರಂಗಭೂಮಿ ಹಾಗೂ ಹಗಲಿರುಳು ಈ ಕಲೆಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕಲಾವಿದರ ಸ್ವಾಭಿಮಾನಕ್ಕೆ ಮಾಡಿರುವ ಘೋರ ಅಪಮಾನ. ಇದು ಯಕ್ಷಗಾನ ಕಲೆಯ ಕತ್ತು ಹಿಸುಕುವ ರಾಜ್ಯ ಸರಕಾರದ ವ್ಯವಸ್ಥಿತ ಸಂಚು ಎಂದವರು ಕಿಡಿಕಾರಿದ್ದಾರೆ.


ಬಿಜೆಪಿ ಸರಕಾರದ ಆಡಳಿತದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದಾಗ ಅವಿಭಜಿತ ಜಿಲ್ಲೆಯ ಅಸ್ಮಿತೆಯಾದ ಯಕ್ಷಗಾನ ಕಲೆಯನ್ನು ಯಕ್ಷಗಾನದ ಹೆಸರಲ್ಲೇ ಯುವ ಜನಾಂಗಕ್ಕೆ  ಪರಿಚಯಿಸಬೇಕು ಎಂಬ ಆಶಯದಿಂದ ಆರಂಭಿಸಲಾದ ಈ ಕೇಂದ್ರದಲ್ಲಿ ನಿರಂತರ ಯಕ್ಷಗಾನ, ನಾಟಕ, ಕಲೆಗೆ ಸಂಬಂಧಿಸಿದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು ಯುವ ಸಮೂಹ ಯಕ್ಷಗಾನ, ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು.


ಯಕ್ಷ ರಂಗಾಯಣ ಕಟ್ಟಡ ನಿರ್ಮಾಣ ಇತ್ಯಾದಿಗಳಿಗೆ ಸುಮಾರು 2 ಕೋ. ರೂ. ಹಣ ಮಂಜೂರಾಗಿ ಯಕ್ಷ ರಂಗಾಯಣ ಹೆಸರಲ್ಲಿ ಕಟ್ಟಡಗಳ ನಿರ್ಮಾಣವಾಗಿದೆ. ಆದರೆ, ಇಂದು ಆ ಹೆಸರಿನಿಂದ 'ಯಕ್ಷ' ಎಂಬ ಪದವನ್ನೇ ಕಿತ್ತೊಗೆಯುವ ಮೂಲಕ ಸರಕಾರ ಯಾರ ಓಲೈಕೆಗೆ ನಿಂತಿದೆ? ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ 'ಯಕ್ಷಗಾನ'ದ ಹೆಸರನ್ನು ಸಾಂಸ್ಕೃತಿಕ ಭೂಪಟದಿಂದಲೇ ಅಳಿಸಿ ಹಾಕಲು ಹೊರಟಿರುವ ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ? ಕಲೆಯ ಹೆಸರನ್ನು ಬದಲಿಸಲು ಸರಕಾರಕ್ಕೆ ಒತ್ತಡ ಹೇರಿದ ಅದೃಶ್ಯ ಶಕ್ತಿಗಳು ಯಾವುವು ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.


ಈ ಹಿಂದೆ ಬಿಜೆಪಿ ಅಧಿಕಾರ ಅವಧಿಯಲ್ಲಿ ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒತ್ತುನೀಡಲಾಗಿತ್ತು. ಯಕ್ಷಗಾನ ಸಮಾವೇಶ, ಮೇಳ ಹೀಗೆ ಹಲವು ವಿಧದ ಕಾರ್ಯಕ್ರಮ ಕೈಗೊಂಡು ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಲೆಗೆ ಒಂದಲ್ಲ ಒಂದು ರೀತಿಯಲ್ಲಿ ದ್ರೋಹ ಬಗೆಯುವ ಪ್ರಯತ್ನ ನಡೆಸುತ್ತಿದೆ.


ಯಕ್ಷಗಾನ ಕಲೆಯನ್ನೂ ಈ ಸರಕಾರಕ್ಕೆ ಸಹಿಸಲಾಗುತ್ತಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಕರಾವಳಿ ರಂಗಾಯಣ ಎಂದು ಹೆಸರು ಬದಲಿಸುವ ನಿರ್ಧಾರಕ್ಕೆ ಮುನ್ನ ಕರಾವಳಿ ಭಾಗದ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ, ಯಾರ ಗಮನಕ್ಕೂ ತಾರದೇ, ಸ್ಥಳಿಯರ ವಿಶ್ವಾಸ ಗಳಿಸದೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.


ಯಕ್ಷಗಾನ ಎಂಬುದು ಕೇವಲ ಒಂದು ಪ್ರದರ್ಶನ ಕಲೆಯಲ್ಲ. ಅದು ಕರಾವಳಿಯ ರಕ್ತಗತವಾಗಿ ಬಂದಿರುವ ಭಾವುಕ ಸಾಂಸ್ಕೃತಿಕ ಅಸ್ಮಿತೆ. ಇಂಥ ಕಲೆಯ ಗೌರವಕ್ಕೆ ಧಕ್ಕೆ ತಂದಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರ ತನ್ನ ಈ ಹಠಮಾರಿ ಮತ್ತು ವಿವೇಚನಾರಹಿತ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು. ರಾಜಕೀಯ ದುರುದ್ದೇಶ ಬದಿಗಿಟ್ಟು, ಕೇಂದ್ರಕ್ಕೆ ಯಕ್ಷ ರಂಗಾಯಣ ಎಂಬ ಮೂಲ ಹೆಸರನ್ನೇ ಉಳಿಸಬೇಕು.


ಸರಕಾರ ಒಂದುವೇಳೆ ತನ್ನ ಪಟ್ಟನ್ನು ಸಡಿಲಿಸದೆ ಹೋದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮಸ್ತ ಯಕ್ಷಗಾನ ಅಭಿಮಾನಿಗಳು, ಮೇಳಗಳು, ಕಲಾವಿದರು ಹಾಗೂ ರಂಗದ ದಿಗ್ಗಜರ ತೀವ್ರ ವಿರೋಧ ಎದುರಿಸಬೇಕಾದೀತು ಎಂದು ಸುನಿಲ್ ಕುಮಾರ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.