ಲೋಕಬಂಧು ನ್ಯೂಸ್ | ಬೈಂದೂರು, ಆ.8
ಕಾಪು ತಾಲೂಕಿನ ಮುದರಂಗಡಿಯಲ್ಲಿ ಹಾಡಹಗಲೇ ಗುತ್ತಿಗೆದಾರ ಡೇವಿಡ್ ಡಿ'ಸೋಜಾ ಕೊಲೆಗೈದ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಯೊಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರಿಂದ ತಪ್ಪಿಸಲು ಯತ್ನಿಸಿದ ಓರ್ವ ಆರೋಪಿಗೆ ಗುಂಡೇಟು ತಗುಲಿದೆ.
ಆರೋಪಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆನ್ನಟ್ಟಿದ ಪೊಲೀಸರು ಒತ್ತಿನೆಣೆ ಬಸ್ ತಡೆದು ತಪಾಸಣೆ ನಡೆಸುತ್ತಿದ್ದಾಗ ಮೂವರು ಆರೋಪಿಗಳು ಓಡಲೆತ್ನಿಸಿದರು.
ಅವರನ್ನು ಪೊಲೀಸರು ಹಿಂಬಾಲಿಸಿದಾಗ ಆರೋಪಿಗಳ ಪೈಕಿ ಉತ್ತರ ಪ್ರದೇಶದ ಥಾನಾ ಫಿಲ್ವಾ ನಿವಾಸಿ ರಾಜು ಎಂಬಾತ ಪೊಲೀಸರ ಮೇಲೆಯೇ ಗುಂಡಿನ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಕಾಪು ಪಿಎಸ್ಐ ತೇಜಸ್ವಿ ಅವರು ತನ್ನ ಸರ್ವಿಸ್ ಪಿಸ್ತೂಲಿನಿಂದ ಶೂಟರ್ ರಾಜು ಕಾಲಿಗೆ ಗುಂಡು ಹೊಡೆದು ಬಂಧಿಸಿದರು. ಆತ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ವೇಳೆ ಕಾಪು ಪಿಎಸ್ಐ ತೇಜಸ್ವಿ ಅವರಿಗೂ ಗುಂಡು ತಾಗಿದ್ದು, ಅವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
