ಕಾಂಗ್ರೆಸ್‌ ಗೆಲುವಿನ ಮೂಲಕ ಪ್ರಜಾಪ್ರಭುತ್ವದ ಗೆಲುವು

ಲೋಕಬಂಧು ನ್ಯೂಸ್ ಬೆಂಗಳೂರು, ಜೂ.18
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮೊದಲ ಸುತ್ತಿನಲ್ಲಿಯೇ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಪ್ರಜಾಪ್ರಭುತ್ವ ಗೆದ್ದಿದೆ. ಜೆಡಿಎಸ್ ಮತ್ತು  ಬಿಜೆಪಿ‌ ಅಡ್ಡ ಮತದಾನದಿಂದ ಸಾಧ್ಯವಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಮತ್ತು ಜನಪರ ನೀತಿಗಳ ಗೆಲುವಾಗಿದೆ ಎಂದು ಬಣ್ಣಿಸಿದರು.


ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಶಿವಣ್ಣ ಬಿ.ಎಸ್, ಪಿ.ವಿ. ಮೋಹನ್, ತಿಪ್ಪಣ್ಣಪ್ಪ ಕಾಮಕನೂರ್ ಮತ್ತು ವಿನಯ್ ಕಾರ್ತಿಕ್ ಗೆಲುವು ಸಾಧಿಸಿದ್ದು ಐವರಿಗೂ ಸುರ್ಜೇವಾಲಾ ಅಭಿನಂದನೆ ತಿಳಿಸಿದ್ದಾರೆ.


ಭಾರೀ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಅಡ್ಡ ಮತದಾನದ ನಡುವೆಯೇ ಕಾಂಗ್ರೆಸ್ 5, ಬಿಜೆಪಿಗೆ ತೆಕ್ಕೆಗೆ 2 ಸ್ಥಾನ ಲಭಿಸಿವೆ. ಆದರೆ, ಈ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಪಕ್ಷ ಜೆಡಿಎಸ್.ಗೆ ಭಾರಿ ಆಘಾತ ಎದುರಾಗಿದ್ದು, ಜೆಡಿಎಸ್​​ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್​​ನಿಂದ ಅಡ್ಡ ಮತದಾನ​​ ಆಗಿರುವುದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.


ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಲಾವಣೆಗೊಂಡಿದ್ದ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದೆ. ನಂಬರ್ ಸರಿಯಾಗಿ ಬರೆಯದಿದ್ದಕ್ಕೆ 1 ಮತವನ್ನು ತಿರಸ್ಕರಿಸಲಾಗಿದೆ.