ರಾಜ್ಯದಲ್ಲಿ ‘ಪ್ರಜಾ ಸೇವಕ ಇಲಾಖೆ’ ಸ್ಥಾಪನೆಗೆ ನಿರ್ಧಾರ

ಲೋಕಬಂಧು ನ್ಯೂಸ್ | ಬೆಂಗಳೂರು, ಜೂ.20
ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳೀಯ ಮಟ್ಟದಲ್ಲೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ‘ಪ್ರಜಾ ಸೇವಕ ಇಲಾಖೆ’ ಎಂಬ ಹೊಸ ಇಲಾಖೆಯನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಜನರ ಸಮಸ್ಯೆ ಆಲಿಸುವ ಜವಾಬ್ದಾರಿಯನ್ನು ನೇರವಾಗಿ ಸಚಿವರಿಗೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.


ವಾರಕ್ಕೊಮ್ಮೆ ತಾಲೂಕು ಭೇಟಿ ಕಡ್ಡಾಯ
ಹೊಸ ವ್ಯವಸ್ಥೆಯಡಿ ರಾಜ್ಯದ ಎಲ್ಲಾ ಸಚಿವರು ವಾರದಲ್ಲಿ ಕನಿಷ್ಟ ಒಂದು ದಿನ ತಾಲೂಕು ಮಟ್ಟದಲ್ಲಿ ಭೇಟಿ ನೀಡುವುದು ಕಡ್ಡಾಯವಾಗಲಿದೆ. ಆ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ನೇರವಾಗಿ ಭೇಟಿ ಮಾಡಿ ಅವರ ಅಹವಾಲು ಮತ್ತು ಸಮಸ್ಯೆಗಳನ್ನು ಆಲಿಸಿ, ಸಂಬಂಧಿತ ಅಧಿಕಾರಿಗಳ ಮೂಲಕ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ. ಆ ಸಭೆಗಳಲ್ಲಿ ಸ್ಥಳೀಯ ಶಾಸಕರಿಗೂ ಭಾಗವಹಿಸುವ ಅವಕಾಶ ಇರಲಿದ್ದು, ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಯ ನಡುವೆ ಸಮನ್ವಯ ಹೆಚ್ಚಿಸುವ ಗುರಿ ಹೊಂದಲಾಗಿದೆ.


ಜನರೇ ಸರ್ಕಾರದ ಕೇಂದ್ರಬಿಂದು
ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬೆಂಗಳೂರಿಗೆ ಬರಬೇಕಾದ ಅಗತ್ಯವಿಲ್ಲ. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆ, ಅರ್ಜಿ ಮತ್ತು ಸಾರ್ವಜನಿಕ ಬೇಡಿಕೆಗಳನ್ನು ತಾಲೂಕು ಮಟ್ಟದಲ್ಲೇ ಸ್ವೀಕರಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗುತ್ತದೆ.


ಪ್ರತ್ಯೇಕ ಐಎಎಸ್ ಅಧಿಕಾರಿಗೆ ಹೊಣೆ
'ಪ್ರಜಾ ಸೇವಕ ಇಲಾಖೆ’ಯ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸಲು ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಇಲಾಖೆಯಡಿ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ನಿಯೋಜಿಸಿ, ಸಾರ್ವಜನಿಕ ಕುಂದುಕೊರತೆಗಳ ಮೇಲ್ವಿಚಾರಣೆ ಹಾಗೂ ಅನುಸರಣೆ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ. ಜನರಿಂದ ಬಂದ ಅರ್ಜಿಗಳ ಸ್ಥಿತಿಗತಿ, ಪರಿಹಾರ ಪ್ರಕ್ರಿಯೆ ಮತ್ತು ಇಲಾಖೆಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆಯನ್ನೂ ರೂಪಿಸುವ ಸಾಧ್ಯತೆ ಇದೆ.


ಶಾಸಕರಿಗೂ ವಿಶೇಷ ಪಾತ್ರ
ಈ ಯೋಜನೆಯ ಮುಂದಿನ ಹಂತದಲ್ಲಿ ಶಾಸಕರು ತಮ್ಮ ಕ್ಷೇತ್ರದ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ನೇರವಾಗಿ ಭೇಟಿ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.


ಅದರಿಂದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ನಡುವಿನ ಸಂಪರ್ಕ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ನಿರೀಕ್ಷೆ ಇದೆ.


ಮನೆ ಬಾಗಿಲಿಗೆ ಆಡಳಿತ
ರಾಜ್ಯ ಸರ್ಕಾರದ ಈ ನಿರ್ಧಾರ ಆಡಳಿತ ಸೇವೆಗಳನ್ನು ವಿಕೇಂದ್ರೀಕರಿಸುವ ಮತ್ತು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಪ್ರಯತ್ನವಾಗಿ ಪರಿಗಣಿಸಲಾಗುತ್ತಿದೆ. ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ರಾಜಧಾನಿಗೆ ಬರುವ ಆವಶ್ಯಕತೆ ಕಡಿಮೆಯಾಗುವ ಸಾಧ್ಯತೆ ಇದೆ.


‘ಪ್ರಜಾ ಸೇವಕ ಇಲಾಖೆ’ಯ ರೂಪುರೇಷೆಗಳು, ಕಾರ್ಯವಿಧಾನ ಮತ್ತು ಜಾರಿಯ ವೇಳಾಪಟ್ಟಿ ಕುರಿತು ಸರ್ಕಾರ ಶೀಘ್ರದಲ್ಲೇ ಹೆಚ್ಚಿನ ವಿವರ ಪ್ರಕಟಿಸುವ ನಿರೀಕ್ಷೆಯಿದೆ.