ಎಸ್ಐಟಿ ತನಿಖಾ ವರದಿ ಶೀಘ್ರ ಬಿಡುಗಡೆಗೆ ಆಗ್ರಹ

ಲೋಕಬಂಧು ನ್ಯೂಸ್ | ಉಡುಪಿ, ಜೂ.17
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ‌.ಡಿ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಲು ನೂರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎನ್ನುವುದು ಆತಂಕಕಾರಿ ಸಂಗತಿ. ಷಡ್ಯಂತ್ರ ಸಂಚು ಹೂಡಿದವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ಜೊತೆಗೆ ಎಸ್ಐಟಿ ತನಿಖಾ ವರದಿಯನ್ನು ಕೂಡಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆಯ 2026- 27ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆ ಬ್ರಹ್ಮಗಿರಿಯ ಪ್ರಗತಿಸೌಧದಲ್ಲಿ ನಡೆದಿದ್ದು, ಈ ಸಭೆಯಲ್ಲಿ ಈ ಆಗ್ರಹ ಮಾಡಲಾಯಿತು.


ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನಾ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.


ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ದೇವದಾಸ ಹೆಬ್ಬಾರ್ ಉದ್ಘಾಟಿಸಿ, ಜನಜಾಗೃತಿ ವೇದಿಕೆಯ ಸಮಾಜಮುಖಿ ಕಾರ್ಯ ವೈಖರಿಗಳು ಶ್ಲಾಘನೀಯ ಎಂದರು.


ಜಿಲ್ಲಾ ವೇದಿಕೆ ಕಾರ್ಯದರ್ಶಿ ನಾಗರಾಜ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.


ನೂತನವಾಗಿ ಆಯ್ಕೆಯಾದ ತಾಲೂಕು ವೇದಿಕೆ ಅಧ್ಯಕ್ಷರಾದ ರಾಜು ಪೂಜಾರಿ ಉಡುಪಿ, ವೃಷಭರಾಜ್ ಕಡಂಬ ಕಾರ್ಕಳ, ಪ್ರಸಾದ್ ಹೆಗ್ಡೆ ಬ್ರಹ್ಮಾವರ, ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ, ಸತ್ಯೇಂದ್ರ ಪೈ ಕಾಪು ಮತ್ತು ವಾದಿರಾಜ ಶೆಟ್ಟಿ ಹೆಬ್ರಿ ಅವರನ್ನು ಅಭಿನಂದಿಸಲಾಯಿತು.


2026- 27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಮದ್ಯ ವರ್ಜನ ಶಿಬಿರ, ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ, ನವಜೀವನೋತ್ಸವ, ಗಾಂಧಿ ಜಯಂತಿ ಕಾರ್ಯಕ್ರಮಗಳ ಸಮಗ್ರ ಅನುಷ್ಠಾನಗಳ ಬಗ್ಗೆ ಕರಾವಳಿ ಪ್ರಾದೇಶಿಕ ವಿಭಾಗದ ಗಣೇಶ್ ಆಚಾರ್ಯ ಮಾಹಿತಿ ನೀಡಿದರು.


ವಿವಿಧ ಕ್ಷೇತ್ರಗಳ ಸಾಧಕರಾದ ಗೀತಾಂಜಲಿ ಸುವರ್ಣ, ಸುಜಾತ ಸುವರ್ಣ, ಸುಧಾಕರ ಕರ್ಕೇರ, ಸುಲೇಖಾ ಶೆಟ್ಟಿ ಮತ್ತು ತಾರನಾಥ ಶೆಟ್ಟಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.


ಮದ್ಯಮುಕ್ತ ಮೆಹಂದಿ ಕಾರ್ಯಕ್ರಮಗಳ ಬಗ್ಗೆ ಎಲ್ಲಾ ತಾಲೂಕುಗಳಲ್ಲಿ ಜಾಗೃತಿಯನ್ನು ಮೂಡಿಸಿ ಪ್ರಚಾರ ಮಾಡುವ ಜೊತೆಗೆ ಮದ್ಯಮುಕ್ತ ಮೆಹಂದಿ ಕಾರ್ಯಕ್ರಮ ನಡೆಸಿದವರನ್ನು ವೇದಿಕೆ ವತಿಯಿಂದ ಅಭಿನಂದಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.


ಜಿಲ್ಲಾ ವೇದಿಕೆಗೆ ನೂತನ ಸದಸ್ಯರಾಗಿ ಅಪ್ಪಣ್ಣ ಹೆಗ್ಡೆ ಪುತ್ರರಾದ ರಾಮಕಿಶನ್ ಹೆಗ್ಡೆ ಅವರನ್ನು ಸೇರ್ಪಡೆಗೊಳಿಸಲಾಯಿತು.


ಸಭೆಯಲ್ಲಿ ಎಲ್ಲಾ ತಾಲೂಕಿನ ಕಾರ್ಯದರ್ಶಿಗಳು ತ್ರೈಮಾಸಿಕ ಸಾಧನಾ ವರದಿ ಮಂಡಿಸಿದರು.


ಉಡುಪಿ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಸ್ವಾಗತಿಸಿ, ಬ್ರಹ್ಮಾವರ ಯೋಜನಾಧಿಕಾರಿ ರಮೇಶ್ ವಂದಿಸಿದರು.