ಲೋಕಬಂಧು ನ್ಯೂಸ್ ಹುಬ್ಬಳ್ಳಿ, ಜೂ.21
ಅಡ್ಡ ಮತದಾನವನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಆ ಬಗ್ಗೆ ಯಾವುದೇ ಅನುಮಾನವಿಲ್ಲ. ಧರ್ಮಸ್ಥಳಕ್ಕೆ ಕರೆದು ಆಣೆ, ಪ್ರಮಾಣದ ಬಗ್ಗೆ ವಿಜಯೇಂದ್ರ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಧರ್ಮಸ್ಥಳವನ್ನು ಎಳೆಯುವುದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಣೆ, ಪ್ರಮಾಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಬಹಳ ಮನನೊಂದು ಮಾತನಾಡಿದ್ದಾರೆ. ಆ ಬಗ್ಗೆ ನಾನು ರಾಜ್ಯಾಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಧರ್ಮಸ್ಥಳ ಒಂದು ಪವಿತ್ರ ಕ್ಷೇತ್ರ. ಭಕ್ತರ ಶ್ರದ್ಧಾಕೇಂದ್ರ. ವಾಸ್ತವಾಂಶ ಕಂಡುಹಿಡಿಯಲು ಸಮಿತಿ ಮಾಡಿದ್ದೇವೆ. ಆ ಮೂಲಕ ಸತ್ಯಾಂಶ ಕಂಡುಕೊಳ್ಳುತ್ತೇವೆ ಎಂದರು.
ಇಂದಲ್ಲ, ನಾಳೆ ಅಡ್ಡ ಮತದಾನ ಮಾಡಿದವರು ಯಾರು ಎಂಬುದು ತಿಳಿಯುತ್ತದೆ. ಆಗ ನಾವು ಅವರಿಗೆ ಏನು ಪಾಠ ಕಲಿಸಬೇಕೊ ಅದನ್ನು ಕಲಿಸುತ್ತೇವೆ. ರಾಜ್ಯಾಧ್ಯಕ್ಷರ ಮನಸ್ಸಿನ ನೋವು ನನಗೆ ಅರ್ಥವಾಗುತ್ತದೆ. ಆ ಕಾರಣ ಧರ್ಮಸ್ಥಳ ವಿಚಾರವನ್ನು ಕೈಬಿಡಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಅವರು ಕೂಡಾ ನೀವು ಹಿರಿಯರು ನಿಮ್ಮ ಸಲಹೆ ಪಾಲಿಸುತ್ತೇನೆ ಎಂದಿದ್ದಾರೆ. ಹಾಗಾಗಿ ಆ ವಿಷಯದ ಚರ್ಚೆ ಈಗ ಬೇಡ ಎಂದರು.