ಧರ್ಮಸ್ಥಳವನ್ನು ಬಿಜೆಪಿ ರಾಜಕಾರಣಕ್ಕೆ ಬಳಸಬೇಡಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.22
ಅಡ್ಡ ಮತದಾನದ ನೆಪವಿಟ್ಟುಕೊಂಡು ನಾಡಿನ ಪುಣ್ಯಕ್ಷೇತ್ರವಾದ ಧರ್ಮಸ್ಥಳವನ್ನು ತಮ್ಮ ರಾಜಕೀಯ ಉದ್ದೇಶಕ್ಕೆ ಬಿಜೆಪಿ ಬಳಸಕೂಡದು ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರ್, ದೇಶದ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸುತ್ತ ಅಲ್ಲಿಂದ ಚುನಾಯಿತರಾಗಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಜೊತೆಗೆ ವಿಧಾನಸಭಾ ಸದಸ್ಯರನ್ನು ಯಾವುದೇ ನಾಚಿಕೆ ಇಲ್ಲದೆ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡು ಸಣ್ಣ ಪುಟ್ಟ ಪಕ್ಷಗಳನ್ನು ನಿರ್ನಾಮ ಮಾಡುತ್ತಿರುವ ಬಿಜೆಪಿಯವರಿಗೆ ಕರ್ನಾಟಕದ ತಮ್ಮ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ದೊಡ್ಡ ಘಟನೆಯಾಗಿದೆ.


ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿ ಬಿಜೆಪಿ ನಡೆಸುತ್ತಿರುವ ಪಕ್ಷಾಂತರ ಪರ್ವ ಎಂಬ ಪ್ರಜಾಪ್ರಭುತ್ವದ ಕಗ್ಗೊಲೆ ಪ್ರಕರಣಗಳು ದೇಶದ ರಾಜಕೀಯವನ್ನೇ ಸಂಪೂರ್ಣ ಕುಲಷಿತಗೊಳಿಸಿದೆ.


ಈ ಹಿಂದೆ ಯಡಿಯೂರಪ್ಪ ಅವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಪ್ರಸ್ತಾಪ ಮಾಡಿದ್ದು ದೊಡ್ಡ ಘಟನೆಯಾಗಿತ್ತು. ಇದೀಗ ಅವರ ಪುತ್ರ ವಿಜಯೇಂದ್ರ ಅದೇ ಹಾದಿ ಹಿಡಿದು, ಅಡ್ಡ ಮತದಾನ ವಿಚಾರಕ್ಕೆ ಧರ್ಮಸ್ಥಳವನ್ನು ಎಳೆದು ತಂದಿರುವುದು ಸರಿಯಾದ ನಿರ್ಧಾರವಲ್ಲ.


ಅಡ್ಡ ಮತದಾನ ಮಾಡಿದವರಿಗೆ ಪತ್ತೆಹಚ್ಚಲು ಈಗಾಗಲೇ ಸತ್ಯಶೋಧನಾ ಸಮಿತಿ ರಚಿಸಿಕೊಂಡಿರುವಾಗ ಧರ್ಮಸ್ಥಳವನ್ನು ಎಳೆದು ತಂದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ  ಭಾಸ್ಕರ  ರಾವ್ ಕೋಟ್ಯಾಂತರ ಜನರ ಭಕ್ತಿ, ನಂಬಿಕೆಯ ಕೇಂದ್ರವಾದ ಧರ್ಮಸ್ಥಳವನ್ನು ರಾಜಕಾರಣಕ್ಕೆ ಬಳಸುವುದು ಸರಿಯಲ್ಲ.


ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಬೇರೆ ಬೇರೆ ರಾಜ್ಯದಲ್ಲಿ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಕರಣಗಳಿಂದಾಗಿ ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬರೆ ಹಾಕಿದ್ದಾರೆ. ಕೇಂದ್ರ ನಾಯಕರಿಗೆ ಕುತಂತ್ರ ರಾಜಕಾರಣದ ಹಾದಿಯನ್ನು ಬಿಟ್ಟು, ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ತಿಳಿಸುವುದು ಉತ್ತಮ ಭಾಸ್ಕರ ರಾವ್ ಕಿದಿಯೂರು ಸಲಹೆ ನೀಡಿದ್ದಾರೆ.