ಲೋಕಬಂಧು ನ್ಯೂಸ್ | ಉಡುಪಿ, ಜೂ.22
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಈ-ಮೈಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು ಆ ಬಗ್ಗೆ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದು, ಅದು ಹುಸಿ ಸಂದೇಶ ಎಂದು ಎಸ್.ಪಿ. ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಮುಖ್ಯ ನಿರ್ವಹಣಾಧಿಕಾರಿ ಜೂ.22ರಂದು ಬೆಳಿಗ್ಗೆ 10:45 ಗಂಟೆಗೆ ತನ್ನ ಕಚೇರಿಯಲ್ಲಿ ಈ-ಮೇಲ್ ಪರಿಶೀಲಿಸಿದಾಗ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ಆಂಗ್ಲಭಾಷೆಯ ಮೈಲ್ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು.
ಕೂಡಲೇ ಕಾರ್ಯಪ್ರವರ್ತರಾದ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ, ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಪೊಲೀಸ್ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಅವರು ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಕರೆಯಿಸಿ ಎಲ್ಲಾ ಕೋಣೆಗಳು, ಹಾಲ್ ಮತ್ತು ಶೌಚಾಲಯಗಳಲ್ಲಿ ತಪಾಸಣೆ ನಡೆಸಲಾಯಿತು. ನ್ಯಾಯಾಲಯದ ಆವರಣ ಹೊರಗೂ ತಪಾಸಣೆ ನಡೆಸಲಾಯಿತು.
ನಂತರ ಇದೊಂದು ಹುಸಿ ಸಂದೇಶ ಎಂದು ಕಂಡುಬಂದ ಕಾರಣ ನ್ಯಾಯಾಲಯದ ಕಲಾಪ ಮುಂದುವರಿಸಲು ಅವಕಾಶ ಮಾಡಿಕೊಡಲಾಯಿತು.
ಹುಸಿ ಬಾಂಬ್ ಮೈಲ್ ಕಳಿಸಿದಾತನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
