ಲೋಕಬಂಧು ನ್ಯೂಸ್ | ಉಡುಪಿ, ಜೂ.20
ಸೇವಾ ನ್ಯೂನತೆ ಮತ್ತು ಅನ್ಯಾಯ ವ್ಯಾಪಾರ ಸಾಬೀತಾದ ಹಿನ್ನೆಲೆಯಲ್ಲಿ ಚೋಳಮಂಡಲಂ ಜನರಲ್ ಇನ್ಶೂರೆನ್ಸ್ ಕಂಪನಿ ರೂ.15 ಲಕ್ಷ ಹಾಗೂ 9 ಶೇ.ಬಡ್ಡಿಯೊಂದಿಗೆ ಪರಿಹಾರ ಮೊತ್ತವನ್ನು ಗ್ರಾಹಕರಿಗೆ ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಬ್ರಹ್ಮಾವರ ಕೋಡಿ ಕನ್ಯಾನ ನಿವಾಸಿ ವೀಣಾ ಕಾಂಚನ್ ಅವರು ತನ್ನ ಮಗ ಚರಣ್ ಕಾಂಚನ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಮಗ ಹೊಂದಿದ್ದ ಕಡ್ಡಾಯ ವೈಯಕ್ತಿಕ ವಿಮಾ ಪಾಲಿಸಿಯಡಿ ವಿಮಾ ಪರಿಹಾರ ಮೊತ್ತ ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಕ್ಲೈಮ್ ಅರ್ಜಿ ಸಲ್ಲಿಸಿದ್ದರು. ಆದರೆ, ವಿಮಾ ಕಂಪನಿ ಯಾವುದೇ ಸಮಂಜಸ ಕಾರಣವಿಲ್ಲದೆ ಕ್ಲೈಮ್ ಮೊತ್ತವನ್ನು ಬಿಡುಗಡೆ ಮಾಡದೆ ವಿಳಂಬ ಮಾಡಿತ್ತು.
ಅದರಿಂದ ನೊಂದ ವೀಣಾ ಕಾಂಚನ್ ವಕೀಲರ ಮೂಲಕ ನೋಟಿಸ್ ನೀಡಿದರೂ ವಿಮಾ ಕಂಪನಿ ಪರಿಹಾರ ಮೊತ್ತ ಪಾವತಿಸದ ಕಾರಣ ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ವಿಮಾ ಕಂಪನಿ ಹೆಚ್ಚುವರಿ ದಾಖಲೆಗಳಾದ ಎಂಎಲ್‌ಸಿ ಚಿಕಿತ್ಸೆ ವರದಿಯನ್ನು ಅನಗತ್ಯವಾಗಿ ಕೇಳಿದ್ದು, ಅದರ ಅಗತ್ಯತೆಯನ್ನು ಸಮರ್ಥಿಸದೆ ಕ್ಲೈಮ್ ಮೊತ್ತ ತಡೆಹಿಡಿದಿರುವುದು ಸೇವಾ ನ್ಯೂನತೆ ಹಾಗೂ ಅನ್ಯಾಯ ವ್ಯಾಪಾರ ಪದ್ಧತಿ ಎಂದು ಅಭಿಪ್ರಾಯಪಟ್ಟಿತು.
ಹಾಗಾಗಿ ಅರ್ಜಿದಾರರ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ 15 ಲಕ್ಷ ರೂ. ಮೊತ್ತವನ್ನು 2024ರ ನ.23ರಿಂದ ವಾರ್ಷಿಕ 9 ಶೇ. ಬಡ್ಡಿ ಸಹಿತ ಪಾವತಿಸಬೇಕು ಎಂದು ಆದೇಶಿಸಿತು. ಅಲ್ಲದೆ, 25 ಸಾವಿರ ಪರಿಹಾರ ಹಾಗೂ 10 ಸಾವಿರ ವ್ಯಾಜ್ಯ ವೆಚ್ಚವನ್ನೂ 2026ರ ಮೇ 18ರ ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸುವಂತೆ ನಿರ್ದೇಶಿಸಿತು.
ಈ ಆದೇಶವನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಸುನಿಲ್ ಟಿ. ಮಾಸರಡ್ಡಿ ಹಾಗೂ ಸದಸ್ಯೆ ಸುಜಾತ ಬಿ. ಕೊರಳ್ಳಿ ಅವರನ್ನೊಳಗೊಂಡ ನ್ಯಾಯಪೀಠ ನೀಡಿದೆ.
ದೂರುದಾರರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಕಾರ್ಕಳ ಹಾಗೂ ಪ್ರವೀಣ್ ಎಂ. ಪೂಜಾರಿ, ಮಲ್ಪೆ ವಾದ ಮಂಡಿಸಿದ್ದರು.