ಲೋಕಬಂಧು ನ್ಯೂಸ್ | ಮಣಿಪಾಲ, ಜೂ.19
ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೃತೀಯ ಲಿಂಗಿ ಮಹಿಳೆಗೆ ಮೊದಲ ಜೆಂಡರ್ ಅಫಮಿರ್ಂಗ್ (ಲಿಂಗ ದೃಢೀಕರಣ) ಶಸ್ತ್ರಚಿಕಿತ್ಸೆಯನ್ನು ಜೂ.10ರಂದು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಮುಖದ ಸ್ತ್ರೀತ್ವ ಮತ್ತು ಸ್ತನಗಳ ವರ್ಧನೆ ಸೇರಿದಂತೆ ಲಿಂಗ ದೃಢೀಕರಣ ಕಾರ್ಯವಿಧಾನಗಳನ್ನು ಈಗಾಗಲೇ ಮಾಡಲಾಗುತ್ತಿದ್ದು ಇದು ಹಲವಾರು ತೃತೀಯ ಲಿಂಗಿಗಳಿಗೆ ಸಹಕಾರಿಯಾಗಿದೆ.
ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ತಂಡ ಮತ್ತು ಮೂತ್ರಶಾಸ್ತ್ರ ವಿಭಾಗ ತಂಡ, ಸಂಪೂರ್ಣ ಲಿಂಗ ದೃಢೀಕರಣ ಜನನಾಂಗ ಶಸ್ತ್ರಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ನಡೆಸಿ ಯಶಸ್ವಿಯಾಗಿದೆ.
ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಜೋಸೆಫ್ ಥಾಮಸ್ ಮತ್ತು ಸಹಪ್ರಾಧ್ಯಾಪಕ ಡಾ.ಹರ್ಷವರ್ಧನ್ ಶೆಟ್ಟಿ ಮತ್ತವರ ತಂಡ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದು, ಮೂತ್ರಶಾಸ್ತ್ರ ವಿಭಾಗದ ಡಾ. ಅನುಪಮ್ ಚೌಧರಿ ಸಹಕರಿಸಿದರು.
ಹಲವಾರು ಗಂಟೆಗಳ ಶಸ್ತ್ರ ಚಿಕಿತ್ಸೆ ತರುವಾಯ ರೋಗಿ ಚೇರಿಸಿಕೊಂಡಿದ್ದು ನೋವು ನಿರ್ವಹಣೆ, ಗಾಯದ ಆರೈಕೆ ಮತ್ತು ಸಮಾಲೋಚನೆ ಬೆಂಬಲದೊಂದಿಗೆ ನೋಡಿಕೊಳ್ಳಲಾಗುತ್ತಿದೆ.
ಆಸ್ಪತ್ರೆಯ ವೈದ್ಯರ ತಂಡದ ಈ ಸಾಧನೆಯನ್ನು ಮಣಿಪಾಲ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಸುಧಾಕರ್ ಕಂಟಿಪುಡಿ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಅವಿನಾಶ್ ಶೆಟ್ಟಿ ಪ್ರಶಂಸಿಸಿದ್ದಾರೆ
