ಬೀದಿ ನಾಯಿ ದಾಳಿಯಿಂದ ಮುಳ್ಳುಹಂದಿಯ ರಕ್ಷಣೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.20
ಬೀದಿ‌ ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಮುಳ್ಳುಹಂದಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಫಾರೆಸ್ಟರ್ ಶಿವಾನಂದ ಚಿಕಿತ್ಸೆ ನೀಡಿ, ಗುಣಮುಖವಾದ ಬಳಿಕ   ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.


ಕಾದಾಟದಲ್ಲಿ ಮೈತುಂಬ ಮುಳ್ಳುಹಂದಿಯ ಅನೇಕ ಮುಳ್ಳುಗಳಿಂದ ಚುಚ್ಚಿಸಿಕೊಂಡಿರುವ ನಾಯಿ ನಾಪತ್ತೆಯಾಗಿದೆ. ಅಪಾಯದ ಸ್ಥಿತಿಯಲ್ಲಿರುವ‌ ನಾಯಿಗೆ ತುರ್ತು ಚಿಕಿತ್ಸೆಯ ಆವಶ್ಯಕತೆ ಇದ್ದು, ನಾಯಿಗಾಗಿ ಹುಡುಕಾಟ ಮುಂದುವರಿದಿದೆ.


ಚಿಟ್ಪಾಡಿ ಶ್ರೀನಿವಾಸ ನಗರದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಮುಳ್ಳುಹಂದಿಯನ್ನು ಗಮನಿಸಿದ ಧನಂಜಯ ದೇವಾಡಿಗ ಎಂಬವರು ಒಳಕಾಡು ಅವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು ಚಾಣಾಕ್ಷತನದಿಂದ ಗೋಣಿಚೀಲ ಬಳಸಿ ಕಾರ್ಯಾಚರಣೆ ನಡೆಸಿ ಗಾಯಾಳು ಮುಳ್ಳುಹಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.


ಮುಳ್ಳುಹಂದಿ ಮುಳ್ಳುಗಳನ್ನು ಸಿಡಿಸಿ ಪ್ರತಿದಾಳಿ ನಡೆಸುವ ಸಾಧ್ಯತೆ ಇತ್ತು.