ಜೂ.14: ವಂಡಾರು ಕೃಷ್ಣಪ್ರಸಾದ್ ಫೌಂಡೇಶನ್‌ನಿಂದ ಸಾಮಾಜಿಕ ನೆರವು

ಲೋಕಬಂಧು ನ್ಯೂಸ್ | ಉಡುಪಿ, ಜೂ.12
ಬ್ರಹ್ಮಾವರ ಸಮೀಪದ ವಂಡಾರು ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಪ್ರವರ್ತಕ ಸಂಸ್ಥೆ ಕೃಷ್ಣಪ್ರಸಾದ್ ಫೌಂಡೇಶನ್ ವತಿಯಿಂದ ಜೂ. 14ರಂದು ಸಾಮಾಜಿಕ ನೆರವು ಮತ್ತು ಸಿಬಂದಿ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಸುಹಾಸನ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕೋಟೇಶ್ವರದ ಯುವ ಮೆರಿಡಿಯನ್ ಸಭಾಂಗಣದಲ್ಲಿ 9.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ ನೆರವು ವಿತರಿಸಲಾಗುವುದು.


ಕುಂದಾಪುರ ತಾಲೂಕಿನ 14 ಮಂದಿ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು, 19 ಮಂದಿಗೆ ವಿದ್ಯಾರ್ಥಿ ವೇತನ ಹಸ್ತಾಂತರಿಸಲಾಗುವುದು.


ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ಗೆ 25 ಲಕ್ಷ, ಬಿ.ಬಿ. ಹೆಗ್ಡೆ ಕಾಲೇಜಿಗೆ 5 ಕಂಪ್ಯೂಟರ್, ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಸ್ಕೂಲ್ ಬ್ಯಾಗ್ ಮತ್ತು ಪುಸ್ತಕ ವಿತರಣೆ ಇತ್ಯಾದಿ ನಡೆಯಲಿದೆ.


ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯುವ ಮೆರಿಡಿಯನ್ ಆಡಳಿತ ನಿರ್ದೇಶಕರಾದ ಬಿ.ಉದಯಕುಮಾರ್ ಶೆಟ್ಟಿ ಮತ್ತು ಬಿ.ವಿನಯಕುಮಾರ್ ಶೆಟ್ಟಿ, ಬಿ.ಬಿ.ಹೆಗ್ಡೆ ಕಾಲೇಜು ಪ್ರಾಂಶುಪಾಲ ಉಮೇಶ ಶೆಟ್ಟಿ, ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರು, ದಿನೇಶ ಹೆಗ್ಡೆ ಮೊಳಹಳ್ಳಿ, ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರಿ ಆಡಳಿತ ನಿರ್ದೇಶಕ ಸಂಪತ್ ಶೆಟ್ಟಿ ಮೊದಲಾದವರು ಭಾಗವಹಿಸುವರು.


ಇದೇ ಸಂದರ್ಭದಲ್ಲಿ ಸಂಸ್ಥೆ ಸಿಬಂದಿಗಳಿಗೆ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದವರು ವಿವರಿಸಿದರು.


ಸಂಸ್ಥೆಯ ಸೇಲ್ಸ್ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಹಾಗೂ ಎಚ್.ಆರ್. ಮ್ಯಾನೇಜರ್'ಗಳಾದ ಚಂದ್ರಶೇಖರ್ ಮತ್ತು ವಿನಯಾ ಶೆಟ್ಟಿ ಇದ್ದರು.