ಲೋಕಬಂಧು ನ್ಯೂಸ್ | ಉಡುಪಿ, ಜೂ.17
ಡಾ.ಶಿವರಾಮ ಕಾರಂತರು ಕ್ಷೇತ್ರಕಾರ್ಯಗಳ ಮೂಲಕ ತಮ್ಮ ಬರವಣಿಗೆಗೆ ಬೇಕಾದ ಮಾಹಿತಿಯನ್ನು ಕಲೆಹಾಕುತ್ತಿದ್ದರು. ಅತಿರಂಜಿತವಾದುದನ್ನು ಅವರು ಒಪ್ಪುತ್ತಿರಲಿಲ್ಲ. ಅವರ ಬರವಣಿಗೆ ಅನುಭವ ಕೇಂದ್ರಿತವಾಗಿತ್ತು ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ಮಂಗಳ ಗಂಗೋತ್ರಿ, ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಶಿವರಾಮ ಕಾರಂತರ ಬದುಕು-ಬರಹ ಸಂಶೋಧನೆಗಳ ಸಾಧ್ಯತೆಗಳು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಣ್ಣಿಗೆ ಕಂಡದ್ದು, ಅನುಭವಿಸಿದ್ದನ್ನು ಕಾರಂತರು ಬರೆಯುತ್ತಿದ್ದರು. ಕುಟುಂಬ, ದಾಂಪತ್ಯ, ಗಂಡು ಹೆಣ್ಣಿನ ಸಂಬಂಧ ಇವುಗಳು ಅವರ ಕಾದಂಬರಿಗಳ ವಸ್ತುವಾಗಿದ್ದವು. ಪ್ರಾದೇಶಿಕ ವಿವರಗಳ ಮೂಲಕ ಕಾರಂತರು ಮಂಡಿಸುತ್ತಿದ್ದ ವೈಚಾರಿಕ ವಿನ್ಯಾಸ ಸಾರ್ವಕಾಲಿಕವಾಗಿತ್ತು. ಜೀವನ ಶ್ರದ್ಧೆ ಮತ್ತು ದುಡಿಮೆಯ ಮೌಲ್ಯವನ್ನು ಅವರು ಎತ್ತಿಹಿಡಿದಿದ್ದರು ಎಂದರು.
ಭಾರತದಲ್ಲಾದ ಸಾಮಾಜಿಕ ಪಲ್ಲಟಗಳನ್ನು ಕಾರಂತರ ಕಾದಂಬರಿಗಳ ಮೂಲಕ ಅರಿತುಕೊಳ್ಳಬಹುದಾಗಿದೆ. ಕಾರಂತರು ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿರುವ ಮನುಷ್ಯರು ಕೂಡಾ ಅಧ್ಯಯನ ವಿಷಯವಾಗಿದೆ ಎಂದರು.
ಡಾ.ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕ ಡಾ.ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ ಭಾಗವಹಿಸಿದ್ದರು. ಲೇಖಕಿ ರೇಖಾ ಬನ್ನಾಡಿ ಉಪನ್ಯಾಸ ನೀಡಿದರು. ಕವಯತ್ರಿ ಜ್ಯೋತಿ ಗುರುಪ್ರಸಾದ್, ಚಿಂತಕಿ ನಿಕೇತನ, ಸಂಶೋಧಕಿ ಶಾಲಿನಿ ಯು.ಬಿ., ಲೇಖಕಿ ರಾಜಶ್ರೀ ಟಿ. ಪೆರ್ಲ ಪ್ರತಿಕ್ರಿಯೆ ನೀಡಿದರು.
ಬಳಿಕ ಜಗನ್ ಪವಾರ್ ನಿರ್ದೇಶನದಲ್ಲಿ, ರಾಜಶ್ರೀ ಪೆರ್ಲ ರಚನೆಯ ನಾನು ಕಾರಂತ ನಾಟಕ ಪ್ರದರ್ಶನಗೊಂಡಿತು.
