ಲೋಕಬಂಧು ನ್ಯೂಸ್ ಉಡುಪಿ, ಜೂ.21
ಜಗತ್ತು ಭಾರತದತ್ತ ತಿರುಗಿ ನೋಡುವಂಥ ಹಲವಾರು ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ. ಆ ಪೈಕಿ ಯೋಗ ದಿನಾಚರಣೆಯೂ ಒಂದು. ಭಾರತೀಯ ಆರೋಗ್ಯ ಪರಂಪರೆಯ ಪ್ರಾಚೀನ ಜ್ಞಾನವನ್ನು ವಿಶ್ವಕ್ಕೆ ನೀಡಿ ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ದೇಶ- ವಿದೇಶಗಳಲ್ಲಿ ಜೂ.21ರಂದು ಯೋಗ ದಿನಾಚರಣೆ ಮಾಡಲಾಗುತ್ತಿದೆ. ಹಿರಿ-ಕಿರಿಯರೆಂಬ ಬೇಧವಿಲ್ಲದೆ ಎಲ್ಲರೂ ದಿನಕ್ಕೆ ಒಂದು ಘಂಟೆ ಯೋಗಾಭ್ಯಾಸ ಮಾಡಬೇಕು. ಜಿಲ್ಲೆಯಿಂದ ತಯಾರಾಗುವ ಯೋಗಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಆಶಿಸಿದರು.ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಗಳ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಘೋಷವಾಕ್ಯದೊಂದಿಗೆ ಭಾನುವಾರ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಿತ್ಯ ಯೋಗಾಭ್ಯಾಸದಿಂದ ಆರೋಗ್ಯ ವೃದ್ದಿಯಾಗುತ್ತದೆ. ಭಾರತದ ಯೋಗವನ್ನು ಇಂದು ವಿಶ್ವದ ಎಲ್ಲ ರಾಷ್ಟ್ರಗಳೂ ಅನುಸರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಆಯುಷ್ಯ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಯೋಗದಲ್ಲಿ ಕಂಡುಕೊಳ್ಳಬಹುದು.
ಪ್ರಧಾನಿ ಮೋದಿ ಇಳಿವಯಸ್ಸಿನಲ್ಲಿಯೂ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ. ಯೋಗಾಭ್ಯಾಸವನ್ನು ದಿನನಿತ್ಯದ ಭಾಗವಾಗಿಸಿಕೊಂಡಾಗ ಇದು ಸಾಧ್ಯ. ದಿನವಿಡೀ ಲವಲವಿಕೆಯಿಂದಿರಲು ಯೋಗಾಭ್ಯಾಸ ಮಾಡಿ ಎಂದವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಯೋಗ ಒತ್ತಡ ನಿವಾರಣೆಗೆ ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅತಿ ಹೆಚ್ಚು ಒತ್ತಡ ಅನುಭವಿಸುತ್ತಾರೆ. ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹ ಸಮನ್ವಯದಿಂದ ಕಾರ್ಯನಿರ್ವಹಿಸುತ್ತದೆ. ನಾಳೆ ಮತ್ತು ನಿನ್ನೆಯ ನಡುವಿನ ಯೋಚನೆಗಳಿಂದ ಮನಸ್ಸು ಒತ್ತಡಕ್ಕೊಳಗಾಗುತ್ತದೆ. ಯೋಗ ನಮಗೆ ವರ್ತಮಾನದಲ್ಲಿ ಬದುಕುವುದನ್ನು ಕಲಿಸುತ್ತದೆ. ಆರೋಗ್ಯಕರ ವೃದ್ದಾಪ್ಯ ಎದುರಿಸಲು ಯೋಗ ಮಾಡಬೇಕು. ಅದರಿಂದ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯಯುತರಾಗುವ ಜೊತೆಗೆ ಕ್ರಿಯಾಶೀಲರಾಗಿ ವೃದ್ಧಾಪ್ಯವನ್ನು ಕಳೆಯಬಹುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ ಮೊದಲಾದವರಿದ್ದರು.