ಬಾಲ ಕಾರ್ಮಿಕ ಮುಕ್ತ ಉಡುಪಿ ಜಿಲ್ಲೆಯಾಗಿಸಲು ಪಣ ತೊಡೋಣ

ಲೋಕಬಂಧು ನ್ಯೂಸ್ | ಉಡುಪಿ, ಜೂ.12
ಬಾಲ ಕಾರ್ಮಿಕ ಪದ್ಧತಿ ಸಮಾಜದ ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿದ್ದು, ಇದು ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಸವಿಯುವುದನ್ನು ಮೊಟಕುಗೊಳಿಸುವ ಜೊತೆಗೆ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಬಾಲ ಕಾರ್ಮಿಕ ಪದ್ಧತಿಯನ್ನು ತಳಮಟ್ಟದಲ್ಲಿ ನಿರ್ಮೂಲನೆ ಮಾಡುವ ಮೂಲಕ ಉಡುಪಿಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ್ ಹೇಳಿದರು.
ಶುಕ್ರವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ಮಕ್ಕಳು ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಹಾಗೂ ಅವರ ರಕ್ಷಣೆಗಾಗಿ ಸಂವಿಧಾನ ಅನೇಕ ಕಾನೂನು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಅದರಿಂದ ವಂಚಿತರಾಗಬಾರದು. ಬಾಲ ಕಾರ್ಮಿಕ ಪದ್ಧತಿ ಇನ್ನೂ ಮುಂದುವರಿಯುತ್ತಿರುವುದು ವಿಷಾದನೀಯ. ಪೋಷಕರು ಮಕ್ಕಳ ಜೀವನವನ್ನು ರೂಪಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸದೇ ಇದ್ದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಪೋಷಕರು ಹಾಗಾಗದಂತೆ ಎಚ್ಚರವಹಿಸಬೇಕು. ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗಬೇಕು ಎಂದರು.


ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಗಳಿಸಿದ ಹಣದಿಂದ ತಂಬಾಕು, ಧೂಮಪಾನ ಸೇರಿದಂತೆ ಮಾದಕ ವ್ಯಸನಗಳಿಗೆ ತುತ್ತಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಹೆಚ್ಚು ಇದೆ. ಬಡತನವಿದ್ದರೂ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದ ಅವರು, ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಮೂಲಕ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಇಲಾಖೆಗಳೊಂದಿಗೆ ಪೋಷಕರು ಸಹಕಾರ ನೀಡಬೇಕು ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಮಕ್ಕಳ ಬಾಲ್ಯವನ್ನು ರಕ್ಷಿಸಿ ಅವರಿಗೆ ಶಿಕ್ಷಣ ನೀಡುವುದರೊಂದಿಗೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅತ್ಯಗತ್ಯವಾಗಿದ್ದು 14 ವರ್ಷದೊಳಗಿನ ಯಾವುದೇ ಮಗು ಹೋಟೆಲ್, ಕಾರ್ಖಾನೆ ಮತ್ತಿತರ ಕಡೆಗಳಲ್ಲಿ ದುಡಿಯುತ್ತಿರುವುದು ಕಂಡುಬಂದಲ್ಲಿ ಅವರ ಮನವೊಲಿಸಿ, ಶಿಕ್ಷಣ ಪಡೆಯುವಂತೆ ಮಾಡಬೇಕು.


ದೇಶದಲ್ಲಿ ಯುವಜನತೆಯ ಸಂಖ್ಯೆ ಹೆಚ್ಚಿದ್ದು, ಯುವ ಸಂಪತ್ತಿನಿಂದ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಪ್ರತಿಜ್ಞಾ ವಿಧಿ ಬೋಧಿಸಿ, 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನಿಯೋಜಿಸುವುದು ಹಾಗೂ 14ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕೈಗಾರಿಕೆ ಅಥವಾ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಶಾಲೆಯಿಂದ ಹೊರಗುಳಿದ ಹೆಚ್ಚಿನ ಮಕ್ಕಳು ಇಂದು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.


ಸಾರ್ವಜನಿಕರು ತಮ್ಮ ಪರಿಸರದಲ್ಲಿ ಯಾವುದೇ ಮಗು ಬಾಲ ಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದರೆ ಅಥವಾ ದುಡಿಯುತ್ತಿರುವುದು ಕಂಡುಬಂದಲ್ಲಿ ಕಾರ್ಮಿಕ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಸಂಬಂಧಪಟ್ಟ ಇಲಾಖೆಯವರು ಆ ಮಗುವನ್ನು ರಕ್ಷಿಸಿ, ಶಿಕ್ಷಣದೊಂದಿಗೆ ಪುನರ್ವಸತಿ ಕಲ್ಪಿಸಲಿದ್ದಾರೆ ಎಂದರು.


ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಉಡುಪಿ ಛೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಡಾ. ವಿಜೇಂದ್ರ ವಸಂತ್ ಮಾತನಾಡಿದರು.


ಇದೇ ಸಂದರ್ಭದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಮತ್ತು ತಿದ್ದುಪಡಿ ಕಾಯ್ದೆ 2016ರ ಕುರಿತು ಮೂಡುಬಿದಿರೆ ಅಲಂಗಾರಿನ ವಿ ಹೆಲ್ಪ್ ಟ್ರಸ್ಟ್‌ನವರಿಂದ ಬೀದಿ ನಾಟಕ ನಡೆಯಿತು.


ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ, ತಾಲೂಕು ಕಾರ್ಮಿಕ ವೃತ್ತ ನಿರೀಕ್ಷಕರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಇಲಾಖೆಯ ಸಿಬ್ಬಂದಿ ಮೊದಲಾದವರಿದ್ದರು.


ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ಕುಮಾರ್ ಸಿ.ಎಚ್. ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು. ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕ ವಿಜೇಂದ್ರ ಕೆ. ವಂದಿಸಿದರು.