ಪೆರ್ಡೂರು ದೇವಳದ ಜೀರ್ಣೋದ್ಧಾರ ಸೂಕ್ತ ಸಮಯದಲ್ಲಿ ಭವ್ಯವಾಗಿ ನೆರವೇರಲಿ

ಲೋಕಬಂಧು ನ್ಯೂಸ್ | ಹೆಬ್ರಿ, ಜೂ.24
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಶಂಸನೀಯ. ಪದ್ಮನಾಭ ಸೃಷ್ಟಿ ಪಾಲಕ. ನಮಗೆ ಈ ಅವಕಾಶ ಒದಗಿ ಬಂದಿದೆ. ಅದಕ್ಕೆ ವಿಶೇಷ ಫಲ ಸಿಗಲಿದೆ. ಊರವರು ತಮ್ಮೂರಿನ ದೇವಳದ ಜೀರ್ಣೋದ್ಧಾರಕ್ಕೆ ಸಹಕಾರ ನೀಡಬೇಕು. ಆ ಮೂಲಕ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕು. ದೇವಳದ ಜೀರ್ಣೋದ್ಧಾರ ಕಾರ್ಯ ಸೂಕ್ತ ಸಮಯದಲ್ಲಿ ಭವ್ಯವಾಗಿ ನೆರವೇರಲಿ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶಿಸಿದರು.
ಬುಧವಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಲಯ ಉದ್ಘಾಟಿಸಿ, ಆಶೀರ್ವಚನ ನೀಡಿದರು.


ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ದೇವರಿಗಾಗಿ ಅಲ್ಲ ಬದಲಾಗಿ ಭಕ್ತರಿಗೋಸ್ಕರ. ಅದರ ಫಲವಾಗಿ ದೇವರು ನಮಗೆ ಹತ್ತು ಪಾಲು ಮರಳಿ ನೀಡುತ್ತಾನೆ. ದೇವಸ್ಥಾನ ನಿರ್ಮಾಣ ಮಾಡಿದರೆ ನಮಗೆ ಶ್ರೇಯಸ್ಸಾಗುತ್ತದೆ. ಭಕ್ತರು ದೇವರ ಆರಾಧನೆ ಮಾಡಿ, ಫಲ ನಿರೀಕ್ಷೆ ಮಾಡುತ್ತೇವೆ. ಕರ್ತವ್ಯ ಪ್ರಜ್ಞೆಯಿಂದ ಮಾಡಿದಾಗ ದೇವರ ಅನುಗ್ರಹ ಸಿಗುತ್ತದೆ ಎಂದರು.


ಈ ಸಂದರ್ಭದಲ್ಲಿ ದೇವಸ್ಥಾನದ ತ್ರಿ-ಡಿ ವೀಡಿಯೊ ಅನಾವರಣ ಮಾಡಲಾಯಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೇವಾ ಕಚೇರಿ ಉದ್ಘಾಟಿಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ಮಾದರಿ ಅನಾವರಣಗೊಳಿಸಿದರು.ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾಹಿತಿ ಕೇಂದ್ರ ಉದ್ಘಾಟಿಸಿದರು.


ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ತುಳುಕೂಟ ಬೆಂಗಳೂರು ಅಧ್ಯಕ್ಷ ಬಿ. ದಿನೇಶ್ ಹೆಗ್ಡೆ ಯೋಜಿತ ನಕ್ಷೆಯ ವೀಡಿಯೊ ಅನಾವರಣ ಮಾಡಿದರು. ಹಿರಿಯ ಅರ್ಚಕ, ಸಮಿತಿಯ ಗೌರವಾಧ್ಯಕ್ಷ ಪಿ. ಕೃಷ್ಣ ಅಡಿಗ ಗಣಕ ಯಂತ್ರಕ್ಕೆ ಚಾಲನೆ ನೀಡಿದರು.


ಶ್ರೀಕ್ಷೇತ್ರದ ತಂತ್ರಿಗಳಾದ ಕೆ.ಜಿ. ವಿಠಲ ತಂತ್ರಿ ಮತ್ತು ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ, ದೇವಳದ ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್., ಸರದಿ ಅರ್ಚಕ ಪಿ. ಶ್ರೀಧರ ಅಡಿಗ ಉಪಸ್ಥಿತರಿದ್ದರು.


ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಪಕ್ಕಾಲ್ ಸ್ವಾಗತಿಸಿದರು.