ಅಮಿತ್ ಶಾ ಭೇಟಿಗೆ ಹೊರಟ ಎಂಇಎಸ್ ಮುಖಂಡರಿಗೆ ಪೊಲೀಸ್ ತಡೆ

ಲೋಕಬಂಧು ನ್ಯೂಸ್ | ಬೆಳಗಾವಿ, ಜೂ.20
ಕೊಲ್ಹಾಪುರಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ತೆರಳುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಮತ್ತು ಕಾರ್ಯಕರ್ತರನ್ನು ಕರ್ನಾಟಕ ಪೊಲೀಸರು ಶನಿವಾರ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ತಡೆದಿದ್ದಾರೆ.
ಬೆಳಗಾವಿ ಸೇರಿದಂತೆ ಗಡಿಭಾಗದ ಮರಾಠಿ ಭಾಷಿಕರ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲು ಎಂಇಎಸ್ ಮುಖಂಡರು ವಾಹನಗಳಲ್ಲಿ ಕೊಲ್ಹಾಪುರದತ್ತ ತೆರಳುತ್ತಿದ್ದರು. ಆ ಕುರಿತು ಮುಂಚಿತವಾಗಿ ಮಾಹಿತಿ ಪಡೆದಿದ್ದ ಪೊಲೀಸ್ ಇಲಾಖೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹತ್ತರಗಿ ಟೋಲ್ ಗೇಟ್ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.


ಎಂಇಎಸ್ ಮುಖಂಡರ ವಾಹನಗಳು ಟೋಲ್ ಗೇಟ್ ತಲುಪುತ್ತಿದ್ದಂತೆಯೇ ಪೊಲೀಸರು ಅವುಗಳನ್ನು ತಡೆದು ಮುಂದೆ ಸಾಗದಂತೆ ಸೂಚಿಸಿದರು. ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎಂಇಎಸ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.


ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ. ನಮ್ಮ ಸಮಸ್ಯೆಗಳನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲು ತೆರಳುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ನಮ್ಮ ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಎಂಇಎಸ್ ಮುಖಂಡರು ಆರೋಪಿಸಿದರು. ತಮ್ಮ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಕರ್ನಾಟಕ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಆದರೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ತಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.