ನೀಟ್ ಮರುಪರೀಕ್ಷೆ: ತಡವಾಗಿ ಬಂದ ವಿದ್ಯಾರ್ಥಿನಿ ವಾಪಾಸ್

ಲೋಕಬಂಧು ನ್ಯೂಸ್ ಕೊಪ್ಪಳ, ಜೂ.22
ಭಾನುವಾರ ಜೂ.21ರಂದು ನಡೆದ ನೀಟ್-ಯುಜಿ ಮರುಪರೀಕ್ಷೆಗೆ ವಿದ್ಯಾರ್ಥಿನಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಸಿಬ್ಬಂದಿ ಒಳಗಡೆ ಬಿಡಲಿಲ್ಲ. ಅವಕಾಶ ನೀಡುವಂತೆ ಪಾಲಕರು ಹಾಗೂ ವಿದ್ಯಾರ್ಥಿನಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಪ್ರಸಂಗ‌ ವರದಿಯಾಗಿದೆ.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಂಗಾವತಿಯ ವಿದ್ಯಾರ್ಥಿನಿ ಬೀಬಿ ಫಾತಿಮಾ ಪರೀಕ್ಷೆ ಬರೆಯಬೇಕಿತ್ತು. ಆದರೆ, ತಂದೆಯೊಂದಿಗೆ ಬೈಕ್‌ನಲ್ಲಿ ಬರುವಾಗ ಬೈಕ್ ಕೆಟ್ಟಿದ್ದು, 1.30ರೊಳಗೆ ಪರೀಕ್ಷಾ ಕೇಂದ್ರದೊಳಗೆ ಇರಬೇಕಿತ್ತು. ಆದರೆ, 1.53ಕ್ಕೆ ಅಂದರೆ 23 ನಿಮಿಷ ತಡವಾಗಿ ಬಂದಿದ್ದು, ಪೊಲೀಸರು ಕಾಲೇಜು ಗೇಟ್‌ ತೆಗೆದು, ಒಳಗೆ ಬಿಟ್ಟಿದ್ದರು. ಆದರೆ, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಸಮಯ ಮೀರಿದೆ ಎಂದು ಹೇಳಿ ವಿದ್ಯಾರ್ಥಿನಿಯನ್ನು ಒಳಗೆ ಕರೆಸಿಕೊಳ್ಳಲಿಲ್ಲ.


ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭ ಆಗಲಿದೆ. ಇನ್ನೂ 5 ನಿಮಿಷ ಅವಕಾಶ ಇದೆ. ಕೇಂದ್ರದೊಳಗೆ ಬಿಡಿ ಎಂದು ಪಾಲಕರು ಮತ್ತು ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು. ಆಗ ಮೇಲ್ವಿಚಾರಕರು, ಮಧ್ಯಾಹ್ನ 1.30ರೊಳಗೆ ಕೇಂದ್ರದೊಳಗೆ ಇರಬೇಕು. ಅಷ್ಟರೊಳಗೆ ಬಯೋಮೆಟ್ರಿಕ್ ಮಾಡಬೇಕು. ಆದರೆ, ತಡವಾಗಿದೆ. ಹಾಗಾಗಿ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.


ವಿದ್ಯಾರ್ಥಿನಿ ಪರೀಕ್ಷೆ ಬರೆಯಲಾಗದೆ ಮನೆಗೆ ಮರಳಿದರು.