ರಾಹುಲ್ ಗಾಂಧಿ ಹುಟ್ಟುಹಬ್ಬ: ಅಶಕ್ತರಿಗೆ ಸವಲತ್ತು ವಿತರಣೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.19
ರಾಹುಲ್ ಗಾಂಧಿ ದೇಶದ ಭವಿಷ್ಯದ ನಾಯಕರಾಗಿದ್ದು ಎಷ್ಟೇ ಟೀಕೆಗಳನ್ನು ಅನುಭವಿಸಿದರೂ ಎದೆಗುಂದದೇ ಸಾಮಾಜಿಕ ನ್ಯಾಯದ ಪರ ದನಿ ಎತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಶುಕ್ರವಾರ ಬ್ರಹ್ಮಗಿರಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬ ಅಂಗವಾಗಿ ವಿಶೇಷ ಚೇತನರಿಗೆ ಸಹಾಯ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.


ನಿರಂತರ ಜನರ ನೋವಿಗೆ ಸ್ಪಂದಿಸುವ, ಸಾಮಾಜಿಕ ನ್ಯಾಯದ ಪರ ಹೋರಾಡುವ, ಮಾನವೀಯ ಹೃದಯದ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತೋಷದಾಯಕ. ಈ ನಿಟ್ಟಿನಲ್ಲಿ ರಮೇಶ್ ಕಾಂಚನ್ ಅಭಿನಂದನಾರ್ಹರು ಎಂದರು.


ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದ್ದು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಡವರ ಉದ್ಧಾರಕ್ಕಾಗಿ ಕೈಗೊಂಡ ಯೋಜನೆಗಳ ಪರಿಣಾಮವಾಗಿ ಭಾರತ ಇಂದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದಿದೆ ಎಂದರು.


ಕಾಂಗ್ರೆಸ್ ರಾಜಕೀಯ ಶಕ್ತಿ 
ವಿರೋಧ ಪಕ್ಷಗಳು ಬಡವರ ಉದ್ಧಾರ ಮಾಡುವ ಬದಲು ಶ್ರೀಮಂತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವೇ ಬಡವರ ಪರ ಕೆಲಸ ಮಾಡುತ್ತಿರುವ ರಾಜಕೀಯ ಶಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟರೆ ಬಡವರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಬಡವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು  ಎಂದು ಪ್ರಸಾದ್ ಕಾಂಚನ್ ಮನವಿ ಮಾಡಿದರು.


ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸುಮಾರು 75 ಮಂದಿ ವಿಶೇಷ ಚೇತನರಿಗೆ ಸಹಾಯ ಸಾಧನಗಳಾದ ಶ್ರವಣ ಸಾಧನ, ಕಂಬೋಡ್ ವ್ಹೀಲ್ ಚೇರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಕ್ರಚರ್ಸ್ ಹಾಗೂ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಪಕ್ಷ ಪ್ರಮುಖರಾದ ಹರಿಪ್ರಸಾದ್ ರೈ ಮಣಿಪಾಲ, ಕೇಶವ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ನರಸಿಂಹಮೂರ್ತಿ, ಸದಾನಂದ ಕಾಂಚನ್, ಹಬೀಬ್ ಅಲಿ, ಕುಶಲ ಶೆಟ್ಟಿ, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ಗಣೇಶ್ ನೆರ್ಗಿ, ಸಜ್ಜನ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಹಮ್ಮದ್, ಸೂರಜ್ ಕಲ್ಮಾಡಿ, ಸೌರಭ್ ಬಲ್ಲಾಳ್, ಸುರೇಶ್ ಶೆಟ್ಟಿ ಬನ್ನಂಜೆ, ರಾಘವೇಂದ್ರ ಎನ್., ಮಮತಾ ಶೆಟ್ಟಿ, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರಿದ್ದರು.