ಸಾಂಕ್ರಾಮಿಕ ರೋಗಗಳು ಹರಡದಂತೆ ಅರಿವು ಮೂಡಿಸಿ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.19
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು ಜನಸಾಮಾನ್ಯರಲ್ಲಿ ರೋಗ ಹರಡುವಿಕೆ, ನಿಯಂತ್ರಣ, ಮುಂಜಾಗ್ರತೆ ಇತ್ಯಾದಿಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಎಚ್ಚರದಿಂದಿರಲು‌ಹೆಚ್ಚಿನ‌ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ- ಮಲೇರಿಯಾ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮುಂಗಾರು ಮಳೆ ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ. ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಸಂತಾನೋತ್ಪತಿ ವೃದ್ಧಿಯಾಗಿ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ, ಫೈಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಅವುಗಳನ್ನು ತಡೆಗಟ್ಟುವ ಕುರಿತು ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್'ಗಳು ಕಾರ್ಯಪ್ರವೃತ್ತರಾಗುವುದರೊಂದಿಗೆ ಸಮುದಾಯದ ಸಹಭಾಗಿತ್ವದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.


ಜನಸಾಮಾನ್ಯರು ತಮ್ಮ ಸುತ್ತಮುತ್ತಲ ಪರಿಸರವನ್ನು ಉತ್ತಮವಾಗಿಟ್ಟುಕೊಂಡಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆದಲ್ಲಿ ರೋಗ ರುಜಿ ಹರಡಲು ಕಾರಣವಾಗುತ್ತದೆ. ಅದಕ್ಕೆ ಆಸ್ಪದ ನೀಡಬಾರದು. ಸ್ವಚ್ಛ ಪರಿಸರ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಆ  ಬಗ್ಗೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಉದಾಸೀನತೆ ಮಾಡಬಾರದು ಎಂದರು.


ಸಾಮಾನ್ಯವಾಗಿ ಮುಂಗಾರಿನಲ್ಲಿ ಮಳೆ ಬಿಟ್ಟು ಬಿಟ್ಟು ಬರುವ ಸಂದರ್ಭದಲ್ಲಿ ಮನೆ ಹಾಗೂ ಕಟ್ಟಡಗಳ ಸುತ್ತಮುತ್ತಲಿನ ಹೊರಾಂಗಣದಲ್ಲಿ ಘನತ್ಯಾಜ್ಯ, ಅನುಪಯುಕ್ತ ವಸ್ತುಗಳು, ಟೈರುಗಳು, ಎಳನೀರಿನ ಚಿಪ್ಪು ಇತ್ಯಾದಿಗಳಲ್ಲಿ ನೀರು ಶೇಖರಣೆಯಾಗಿ ಲಾರ್ವಾಳು ಉತ್ಪತ್ತಿಯಾಗಿತ್ತವೆ. ಸೊಳ್ಳೆಗಳ ತಾಣಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುಂದಾಗಬೇಕು.


ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒಂದೊಮ್ಮೆ ಅವುಗಳನ್ನು ಉಲ್ಲಂಘಿಸಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.


ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳು ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಳೆದ ನಾಲ್ಕೈದು ವರ್ಷಗಳಿಂದ ಕಂಡುಬರುತ್ತಿದೆ. ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಮಳೆಗಾಲದಲ್ಲಿ ಮಳೆಯ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಸ್ವಯಂಸೇವಕರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳು ಮನೆ ಮನೆಗೆ ಭೇಟಿ ನೀಡಿ, ಸೊಳ್ಳೆಗಳ ಸಂತಾನೋತ್ಪತ್ತಿ ತಾಣ ನಿರ್ಮೂಲನೆಗೊಳಿಸುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡದಂತೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.


ಉದ್ಯೋಗ ಅರಸಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರಿಂದಲೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿದ್ದು, ಅದರ ನಿಯಂತ್ರಣಕ್ಕೆ ನಗರಸಭೆ ಆಯುಕ್ತರು ಕಟ್ಟಡ ನಿರ್ಮಾಣ ಸಂಸ್ಥೆಗಳು ಹಾಗೂ ಕಾರ್ಮಿಕ ಗುತ್ತಿಗೆದಾರರ ಸಭೆ ಕರೆದು, ಅವುಗಳ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ಒತ್ತುನೀಡಬೇಕು ಎಂದರು.


ಜಿಲ್ಲೆಯ ಬಂದರು ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮೀನುಗಾರಿಕೆ ಚಟುವಟಿಕೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಬೋಟುಗಳ ನಿಲುಗಡೆಯಾಗಿದ್ದು, ಅಲ್ಲಿನ ಟ್ಯಾಂಕ್‌ಗಳು ಹಾಗೂ ಬದಿಯಲ್ಲಿ ಅಳವಡಿಸಿರುವ ಟೈರುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತದೆ. ಹಾಗಾಗದಂತೆ ಎಚ್ಚರವಹಿಸಬೇಕು ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ತೋಟಗಾರಿಕೆ ಬೆಳೆಗಳಾದ ಅಡಿಕೆಯ ಹಾಳೆ, ಅನಾನಸ್ ಎಲೆಗಳ ಸಂಧಿಗಳು ಹಾಗೂ ರಬ್ಬರ್ ಸಂಗ್ರಹದ ಟಬ್'ಗಳಲ್ಲಿಯೂ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರವಾಗಿರುತ್ತದೆ. ಆ ಬಗ್ಗೆಯೂ  ಎಚ್ಚರವಹಿಸುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರು.


ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯ, ಶಾಲಾ ಕಾಲೇಜು, ಅಂಗನವಾಡಿ ಮತ್ತಿತರ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಗಳನ್ನು ಆಗಾಗ ಕೈಗೊಳ್ಳಬೇಕು. ಕಲ್ಲು ಕ್ವಾರಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಚಿಕ್ಕ ಚಿಕ್ಕ ತಾತ್ಕಾಲಿಕ ಕ್ವಾರಿಗಳಲ್ಲಿ ಲಾರ್ವರ್ ಸೈಡ್ ಸಿಂಪಡಿಸಿ ಲಾರ್ವಾ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ಎಂದರು.


ಗ್ರಾಮೀಣ ಭಾಗದ ಪ್ರತೀ ಪಂಚಾಯತ್'ನಲ್ಲಿಯೂ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಸಭೆ ಕರೆದು ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಗೆ ಕ್ರಮವಹಿಸಬೇಕು.


ಸ್ಥಳೀಯ ಸಂಸ್ಥೆಗಳು ಸಾಂಕ್ರಾಮಿಕ ರೋಗ ತಡೆ ನಿಟ್ಟಿನಲ್ಲಿ ಕರ್ನಟಕ ಸಾಂಕ್ರಾಮಿಕ ರೋಗಗಳ ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲಿ ಅಂಥವರ ವಿರುದ್ಧ ದಂಡ ವಿಧಿಸಬೇಕು ಎಂದರು.


ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ ಮೊದಲಾದವರಿದ್ದರು.